ಮೊಗಾಡಿಶು(ಸೊಮಾಲಿಯಾ):ರಾಜಧಾನಿ ಮೊಗಾಡಿಶುನಲ್ಲಿ ಶನಿವಾರ ನಡೆದ ಪ್ರತ್ಯೇಕ ಕಾರು ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 100 ಕ್ಕೇರಿದೆ. ದುರ್ಘಟನೆಯಲ್ಲಿ 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 2017 ರಲ್ಲಿ ನಡೆದ ಭೀಕರ ದಾಳಿಯಲ್ಲಿ 500 ಜನರು ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ದೇಶದಲ್ಲಿ ನಡೆದ ಅತಿದೊಡ್ಡ ಬಾಂಬ್ ದಾಳಿ ಇದಾಗಿದೆ.
ಈ ಬಗ್ಗೆ ರಾಷ್ಟ್ರಾಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಅವರೇ ಮಾಹಿತಿ ನೀಡಿದ್ದು, ಘಟನೆ ಭೀಕರವಾಗಿದೆ. ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸಾವು-ನೋವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ದೇಶದ ಹೆಚ್ಚಿನ ಭಾಗ ಉಗ್ರರ ದಾಳಿಯಿಂದ ನಲುಗುತ್ತಿದೆ. ಈ ದಾಳಿಯೂ ಕೂಡ ಉಗ್ರ ಸಂಘಟನೆಯದ್ದೇ ಕೃತ್ಯವಾಗಿದೆ. ಹೇಡಿತನ ಮತ್ತು ಕ್ರೂರ ದಾಳಿಯ ವಿರುದ್ಧ ಸರ್ಕಾರ ಹೋರಾಡಲಿದೆ ಎಂದು ಹೇಳಿದ್ದಾರೆ.
ರಾಜಧಾನಿಯನ್ನೇ ಗುರಿಯಾಗಿಸಿಕೊಂಡು ನಡೆಸಲಾದ ಸ್ಫೋಟದಲ್ಲಿ ಮಕ್ಕಳು, ಮಹಿಳೆಯರು, ಪೊಲೀಸರು ಮತ್ತು ಪತ್ರಕರ್ತರು ಪ್ರಾಣತೆತ್ತಿದ್ದಾರೆ. ಉಗ್ರವಾದ ಹತ್ತಿಕ್ಕುವ ಬಗ್ಗೆ ಸರ್ಕಾರ ಸಭೆ ನಡೆಸುತ್ತಿರುವ ನಡುವೆಯೇ ದಾಳಿ ನಡೆದಿದೆ.