ಟೆಕ್ಸಾಸ್(ಅಮೆರಿಕ):ಟೆಕ್ಸಾಸ್‌ನ ಶಾಪಿಂಗ್ ಸೆಂಟರ್ ಬಳಿ ಸಣ್ಣ ವಿಮಾನ ಪತನಗೊಂಡು ಬೆಂಕಿ ಹೊತ್ತಿಕೊಂಡು ಪೈಲಟ್ ಮೃತಪಟ್ಟಿದ್ದಾರೆ. ಟೆಕ್ಸಾಸ್‌ನಲ್ಲಿ ಮಂಗಳವಾರ ಘಟನೆ ನಡೆಯಿತು.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪ್ಲಾನೋದಲ್ಲಿನ ಶಾಪಿಂಗ್ ಸೆಂಟರ್ ಪಾರ್ಕಿಂಗ್ ಸ್ಥಳದಲ್ಲಿ ಸಣ್ಣ ವಿಮಾನ (ಸಿಂಗಲ್ ಇಂಜಿನ್ ಮೂನಿ ಎಂ20) ಹಠಾತ್ ಅಪಘಾತಕ್ಕೀಡಾಯಿತು. ತಕ್ಷಣ ಬೆಂಕಿ ಹೊತ್ತಿಕೊಂಡಿತು. ಈ ಅಪಘಾತದಲ್ಲಿ ಪೈಲಟ್ ಸಜೀವ ದಹನವಾಗಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಅಷ್ಟರಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಕೆಲ ವಾಹನಗಳು ಸುಟ್ಟು ಕರಕಲಾದವು.
ವಿಮಾನ ನಿಲ್ದಾಣವು ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ. ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸಿದೆಯೇ ಎಂದು ನಿರ್ಧರಿಸಲು ತನಿಖೆ ನಡೆಸಲಾಗುತ್ತಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದೆ. ಘಟನೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಟೆಕ್ಸಾಸ್‌ನ ಮೆಕಿನ್ನಿಯಲ್ಲಿ ಬುಲ್ಲಿ ಲ್ಯಾನ್ಸರ್ ಐವಿ-ಪಿ ಪ್ರಾಪ್‌ಜೆಟ್ ರನ್‌ವೇ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದಿತ್ತು. ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿ ಸಣ್ಣ ವಿಮಾನ ಅಪಘಾತಗಳ ಸಂಖ್ಯೆ ಹೆಚ್ಚಾಗ್ತಿವೆ. 2019ರಲ್ಲಿ 988 ಅಪಘಾತಗಳು ಸಂಭವಿಸಿವೆ. 307 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ 939 ಅಪಘಾತಗಳು ಸಂಭವಿಸಿದ್ದು, 268 ಮಂದಿ ಸಾವನ್ನಪ್ಪಿದ್ದಾರೆ. ರನ್ ವೇ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪುವುದು ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗಿದೆ.
ಇನ್ನು, ಹವಾಯಿಯಲ್ಲಿ ಅಮೆರಿಕ ನೌಕಾಪಡೆಯ ಬೃಹತ್ ಕಣ್ಗಾವಲು ವಿಮಾನವೊಂದು ರನ್‌ವೇಯಲ್ಲಿ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿದೆ. ವಿಮಾನದಲ್ಲಿ ಒಂಬತ್ತು ಜನರಿದ್ದು, ಎಲ್ಲರೂ ಈಜಿ ದಡ ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಮಾನ ಸಮುದ್ರದಲ್ಲಿ ತೇಲುತ್ತಿದ್ದ ದೃಶ್ಯ ದೊರೆತಿದೆ. ಹವಾಯಿ ಮೆರೈನ್ ಕಾರ್ಪ್ಸ್ ಬೇಸ್‌ನಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಈ ಅಪಘಾತವನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಘಟನೆ ಬಗ್ಗೆ ತಿಳಿದ ತಕ್ಷಣ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಅಷ್ಟೊತ್ತಿಗಾಗಲೇ ಎಲ್ಲಾ ಪ್ರಯಾಣಿಕರು ತಾವಾಗಿಯೇ ಈಜಿ ದಡ ತಲುಪಿದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ರನ್‌ವೇಯಿಂದ ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದ ಅಮೆರಿಕ ನೌಕಾಪಡೆ ವಿಮಾನ-ವಿಡಿಯೋ