ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಹಣದುಬ್ಬರ ಹಾಗೂ ವಿದೇಶಿ ವಿನಿಮಯ ಕೊರತೆಯ ನೇರ ಪರಿಣಾಮ ಅಲ್ಲಿನ ಜನಸಾಮಾನ್ಯರನ್ನು ಹೈರಾಣಾಗಿಸಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಹೀಗೆ ಬಂದ ಬಹುತೇಕರು ಬರಿಗೈಲಿ ಹತಾಶೆಯಿಂದ ಮನೆಗೆ ಮರಳುತ್ತಿದ್ದಾರೆ. ಏಕೆಂದರೆ, ಒಂದೋ ಅಂಗಡಿಗಳಲ್ಲಿ ಸರಕು ಖಾಲಿಯಾಗಿದೆ ಎಂಬ ಉತ್ತರ ಸಿಗುತ್ತದೆ, ಇಲ್ಲವೇ ಸಾಮಗ್ರಿ ಖರೀದಿಸಲು ಕೈಯಲ್ಲಿದ್ದ ಹಣ ಸಾಲದಾಗುತ್ತದೆ. ಇದು ಇಂದಿನ ಶ್ರೀಲಂಕಾದ ಚಿತ್ರಣ.
ಹೀಗಿದೆ ಅಗತ್ಯ ವಸ್ತುಗಳ ದರ: ರಾಜಧಾನಿ ಕೊಲಂಬೊದಲ್ಲಿನ ಸೂಪರ್‌ಮಾರ್ಕೆಟ್ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಪ್ರತಿ ಕೆ.ಜಿ ಅಕ್ಕಿಗೆ 220 ರೂ ಇದ್ದು, ಗೋಧಿ ಕೆ.ಜಿಗೆ 190 ರೂಪಾಯಿಯಂತೆ ಮಾರಾಟವಾಗುತ್ತಿದೆ. ಒಂದು ಕಿಲೋಗ್ರಾಂ ಸಕ್ಕರೆ 240 ರೂ. ಆಗಿದ್ದು, ತೆಂಗಿನ ಎಣ್ಣೆಗೆ ಲೀಟರ್‌ಗೆ 850 ರೂ.ನಂತೆ ಸಿಗುತ್ತಿದೆ. ಒಂದು ಮೊಟ್ಟೆಗೆ 30 ರೂ. ಇದೆ, ಅಷ್ಟೇ ಅಲ್ಲ, 1 ಕೆಜಿ ಹಾಲಿನ ಪುಡಿ ಬರೋಬ್ಬರಿ 1,900 ರೂ.ಗೆ ಮಾರಾಟವಾಗುತ್ತಿದೆ.