ಮೆಕ್ಸಿಕೋ: ಬಸ್ವೊಂದು ಕಂದಕಕ್ಕೆ ಉರುಳಿ ಭಾರತೀಯ ಪ್ರಜೆಗಳೂ ಸೇರಿ ಒಟ್ಟು 17 ಜನ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಬರೋಬ್ಬರಿ ಇಪ್ಪತ್ಮೂರು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಪಶ್ಚಿಮ ಮೆಕ್ಸಿಕನ್ ರಾಜ್ಯವಾದ ನಯರಿತ್ನಲ್ಲಿ ನಡೆದಿದೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಮೆಕ್ಸಿಕೋ ದಿಂದ ದಕ್ಷಿಣ ಕ್ಯಾಲಿಫೋರ್ನಿಯಾದ ಗಡಿ ಪಟ್ಟಣ ಟಿಜುವಾನಾಗೆ ಹೊರಟಿತ್ತು.
ಗುರುವಾರ ಬೆಳಗ್ಗೆ ನಯರಿತನ್ ಘಾಟ್ ಪ್ರದೇಶದಲ್ಲಿ ತೆರಳುತ್ತಿದ್ದ ವೇಳೆ ಬಸ್ ಚಾಲಕ ನಿದ್ರೆಗೆ ಜಾರಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ 164 ಅಡಿ ಆಳದ ಕಂದಕಕ್ಕೆ ಉರಳಿ ಬಿದ್ದಿದೆ. ಮೃತರಲ್ಲಿ ಆರು ಜನ ಭಾರತೀಯ ಪ್ರಜೆಗಳು ಇದ್ದರೆಂದು ಗುರುತಿಸಲಾಗಿದೆ. ರಾಜನ್ ಸಿಂಗ್ (21) ಮಂದೀಪ್ ಕುಮಾರ್ (22) ಆಡಮಾ ಕೇನ್ (46) ಹ್ಯಾನಿಡೌ ಕೇನ್ ಎಂದು ಬ್ರಿಟಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ಇನ್ನೂ ಇಬ್ಬರ ಹೆಸರು ಪತ್ತೆಯಾಗಿಲ್ಲ.
ಡೈಲಿ ಮೇಲ್ ವರದಿ ಪ್ರಕಾರ ಮೆಕ್ಸಿಕೋ ನಗರದಿಂದ ಹೊರಟಿದ್ದ ಎಲೈಟ್ ಪ್ಯಾಸೆಂಜರ್ ಲೈನ್ ಬಸ್ ಅಪಘಾತಕ್ಕಿಡಾಗಿದೆ. ಘಟನೆ ಸಂಭವಿಸಿದ ಬಳಿಕ ನಯರಿತ್ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ತುಂಬಾ ಆಳಕ್ಕೆ ಬಿದ್ದ ಕಾರಣ ರಕ್ಷಣೆ ಕಾರ್ಯ ಕಷ್ಟಕರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.