ಲಂಡನ್ (ಇಂಗ್ಲೆಡ್): ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಲಂಡನ್ನಲ್ಲಿ ವಿಶ್ವಜ್ಯೋತಿ ಬಸವವೇಶ್ವರರ ಪ್ರತಿಮೆ ಸ್ಥಳಕ್ಕೆ ಭೇಟಿ ನೀಡಿ, ಗೌರವ ಸಲ್ಲಿಸಿದ್ದಾರೆ. ಈ ವೇಳೆ ಬಸವಣ್ಣನವರ ವಚನವನ್ನು ವಿಜಯ್ ಪ್ರಕಾಶ್ ವಾಚಿಸಿದ್ದಾರೆ.
ಪತ್ನಿ ಸಮೇತವಾಗಿ ಬಸವಣ್ಣನವರ ಪ್ರತಿಮೆಗೆ ಗೌರವ ಅರ್ಪಿಸಿದ ವಿಜಯ್ ಪ್ರಕಾಶ್, ಸಮಾಜ ಸುಧಾರಣೆಗೆ ಬಸವಣ್ಣನವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಜೊತೆಗೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ಎಂಬ ಪ್ರಸಿದ್ಧ ವಚನವನ್ನು ಅವರು ಹಾಡಿದರು.
ಭಾರತೀಯರು ಮತ್ತು ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರು ಭಾರತ ಮತ್ತು ಕರ್ನಾಟಕದ ಆದರ್ಶ ಪುರುಷ. ಅವರ ಪ್ರತಿಮೆಯನ್ನು ಬ್ರಿಟನ್ ಸಂಸತ್ತಿನ ಮುಂದೆ ನೋಡುವುದೇ ಪ್ರತಿಯೊಬ್ಬ ಭಾರತೀಯ ಹಾಗೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.