ಇಸ್ಲಾಮಾಬಾದ್:ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ (ಕೆಪಿಕೆ) ಪ್ರಾಂತ್ಯದ ಪೇಶಾವರದಲ್ಲಿ ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಗಂಭೀರವಾಗಿ ಗಾಯಗೊಳಿಸಿದ್ದರು. ಇದಾದ 48 ಗಂಟೆಗಳಲ್ಲಿ ಮತ್ತೊಮ್ಮೆ ಕ್ರೌರ್ಯ ಮೆರೆದಿರುವ ಕಿಡಿಗೇಡಿಗಳು ಮತ್ತೊಬ್ಬ ಸಿಖ್ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದು ಉದ್ದೇಶಿತ ದಾಳಿಯಾಗಿದ್ದು ಸರ್ಕಾರ ಭದ್ರತೆ ನೀಡಬೇಕು ಎಂದು ಅಲ್ಲಿನ ಸಿಖ್ ಸಮುದಾಯ ಆಗ್ರಹಿಸಿದೆ.
ಮನಮೋಹನ್ ಸಿಂಗ್ (32) ಮೃತಪಟ್ಟ ವ್ಯಕ್ತಿ. ಪೇಶಾವರದ ಉಪನಗರವಾದ ರಶೀದ್ ಗರ್ಹಿಯ ನಿವಾಸಿಯಾಗಿದ್ದಾರೆ. ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಗುಲ್ದಾರ ಚೌಕ್ ಕಕ್ಷಾಲ್ ಬಳಿ ಶಸ್ತ್ರಸಜ್ಜಿತ ವ್ಯಕ್ತಿಗಳ ದಾಳಿಗೆ ಒಳಗಾಗಿ ಪ್ರಾಣ ತೆತ್ತಿದ್ದಾರೆ. ಗುಂಡಿನ ದಾಳಿಗೀಡಾದ ಸಿಂಗ್ರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಚಿಕಿತ್ಸೆ ನೀಡುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೇಶಾವರ ಮೂಲದ ಸಿಖ್ಖರು ಮೂಲತಃ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಸರಾಂತ ವೈದ್ಯ ಹಕೀಮ್ (ಯುನಾನಿ ವೈದ್ಯ) ರನ್ನು ಕಳೆದ ವರ್ಷ ಪೇಶಾವರದ ಅವರ ಆಸ್ಪತ್ರೆಯಲ್ಲೇ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಶುಕ್ರವಾರ(ಜೂನ್ 23 ರಂದು) ಇನ್ನೊಬ್ಬ ಸಿಖ್ ವ್ಯಕ್ತಿಯ ಮೇಲೆ ಗುಂಡು ಹಾರಿಸಲಾಗಿತ್ತು. ಕಾಲುಗಳಿಗೆ ಗುಂಡು ತಗುಲಿ ಆತ ತೀವ್ರ ಗಾಯಗೊಂಡಿದ್ದ. ಪೇಶಾವರದಲ್ಲಿ ಸುಮಾರು 15,000 ಸಿಖ್ಖರು ನೆಲೆಸಿದ್ದಾರೆ. ಪ್ರಾಂತೀಯ ರಾಜಧಾನಿ ಪೇಶಾವರದ ಜೋಗನ್ ಶಾ ನೆರೆಹೊರೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ.
ಕ್ರಮ, ಭದ್ರತೆಗೆ ಸಿಖ್ ಸಂಘ ಆಗ್ರಹ:ನಿರಂತರ ದಾಳಿ, ಹತ್ಯೆಯಿಂದ ಆತಂಕಕ್ಕೀಡಾದ ಸಮುದಾಯದ ಸಂಘಟನೆಯಾದ ಯುನೈಟೆಡ್ ಸಿಖ್ಸ್ ಅಲ್ಪಸಂಖ್ಯಾತ ಸಮುದಾಯಕ್ಕೆ ಭದ್ರತೆ ಮತ್ತು ದಾಳಿಕೋರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಇತರ ಗುಂಪುಗಳೊಂದಿಗೆ ಪಾಕಿಸ್ತಾನದ ದೂತಾವಾಸವನ್ನು ಭೇಟಿ ಮಾಡುವುದಾಗಿ ಅದು ಹೇಳಿದೆ.