ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ಇಬ್ಬರು ಸಾವು, ಐದು ಮಂದಿಗೆ ಗಾಯ

ಅಮೆರಿಕದಲ್ಲಿ ಪಿಸ್ತೂಲ್​ ಹೊಂದುವುದರ ಮೇಲೆ ನಿರ್ಬಂಧ ಹೇರಿದ್ದರ ಹೊರತಾಗಿಯೂ ಸಾಲು ಸಾಲು ಗುಂಡಿನ ದಾಳಿ ನಡೆಯುತ್ತಿವೆ. ನಿನ್ನೆ ಕೂಡ ರಿಚ್ಮಂಡ್​ನಲ್ಲಿ ಗುಂಡಿನ ಶಬ್ದ ಕೇಳಿ ಬಂದಿದೆ.

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ
ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ

By

Published : Jun 7, 2023, 9:35 AM IST

ರಿಚ್ಮಂಡ್(ಅಮೆರಿಕ):ಅಮೆರಿಕದಲ್ಲಿ ಗುಂಡಿನ ದಾಳಿ ಮುಂದುವರಿದಿದೆ. ರಿಚ್‌ಮಂಡ್ ಡೌನ್‌ಟೌನ್‌ನ ವರ್ಜೀನಿಯಾ ಕಾಮನ್‌ವೆಲ್ತ್ ವಿಶ್ವವಿದ್ಯಾನಿಲಯದ ಬಳಿ ಇಬ್ಬರು ವ್ಯಕ್ತಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, ಐವರು ಗಾಯಗೊಂಡ ಘಟನೆ ನಡೆದಿದೆ.

ಮಂಗಳವಾರ ಇಲ್ಲಿ ನಡೆದ ಹೈಸ್ಕೂಲ್ ಪದವಿ ಪ್ರದಾನ ಸಮಾರಂಭದ ನಂತರ ರಿಚ್‌ಮಂಡ್ ಡೌನ್‌ಟೌನ್‌ನ ವರ್ಜೀನಿಯಾ ಕಾಮನ್‌ವೆಲ್ತ್ ವಿವಿ ಬಳಿ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾರೆ. ಘಟನೆಯಲ್ಲಿ ಏಳು ಜನರು ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಇಬ್ಬರು ಅಸುನೀಗಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದಾರೆ. ಇಬ್ಬರು ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರಿಚ್ಮಂಡ್ ಪೊಲೀಸ್ ಮುಖ್ಯಸ್ಥ ರಿಕ್ ಎಡ್ವರ್ಡ್ಸ್ ತಿಳಿಸಿದ್ದಾರೆ.

ರಿಚ್ಮಂಡ್​ನ ಹೈಸ್ಕೂಲ್​ನಲ್ಲಿ ಗಣ್ಯರು ಪದವಿ ಪ್ರದಾನ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ತಕ್ಷಣವೇ ಎಲ್ಲರೂ ಹೊರಗೋಡಿ ಬಂದರು. ಈ ವೇಳೆ ಹೊರಭಾಗದಲ್ಲಿ ಆಗಂತುಕರು ಗುಂಡಿನ ದಾಳಿ ನಡೆಸುತ್ತಿದ್ದರು. ಹಲವರು ಗಾಯಗಳೊಂದಿಗೆ ಆರ್ತನಾದ ಮಾಡುತ್ತಿದ್ದದು ಕಂಡುಬಂದಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಒಟ್ಟು 7 ಮಂದಿ ಗಾಯಗೊಂಡಿದ್ದರು. ಇದರಲ್ಲಿ ಇಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂವರು ಜೀವನ್ಮರಣ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನಿಬ್ಬರು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಸಂಘಟನೆಯ ಬೆದರಿಕೆ ಇದಲ್ಲ. ದಾಳಿಕೋರರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಿಚ್ಮಂಡ್​ ಮೇಯರ್ ಲೆವರ್ ಸ್ಟೋನಿ ಹೇಳಿದ್ದಾರೆ.

ಶಾಲೆಗಳು ಬಂದ್​:ಶಂಕಿತ ದಾಳಿ ಬಳಿಕ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿದ್ದು, ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜನರು ಭಯಗೊಂಡ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಶಾಲೆಗೆ ಮುನ್ನೆಚ್ಚರಿಕ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

ನ್ಯೂ ಮೆಕ್ಸಿಕೋದಲ್ಲಿ ದಾಳಿ:ವಾಯುವ್ಯ ನ್ಯೂ ಮೆಕ್ಸಿಕೊದಲ್ಲಿ ಈಚೆಗೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಮೂವರು ಸಾವನ್ನಪ್ಪಿದ್ದರು. ಸಾರ್ವಜನಿಕರಲ್ಲದೇ, ದಾಳಿಯಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದರು. ಗುಂಡಿನ ಚಕಮಕಿಯಲ್ಲಿ ಪೊಲೀಸರು ದುಷ್ಕರ್ಮಿಯನ್ನು ಗುಂಡಿಕ್ಕಿ ಕೊಂದಿದ್ದರು.

ನಗರದಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ಮಳೆಗರೆದಿದ್ದ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. ಜನರು ಪೊಲೀಸ್ ಇಲಾಖೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದರು. ಅಧಿಕಾರಿಗಳು ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದಿದ್ದು, ಗುಂಡಿನ ದಾಳಿ ನಡೆಸಿದ ಶಂಕಿತನ ಮೇಲೆ ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದರು. ದಾಳಿಯಲ್ಲಿ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು.

ತೆಲಂಗಾಣ ಯುವತಿ ಸಾವು:ಟೆಕ್ಸಾಸ್‌ನ ಡಲ್ಲಾಸ್‌ನಿಂದ ಉತ್ತರಕ್ಕಿರುವ 25 ಕಿಲೋಮೀಟರ್ ದೂರದಲ್ಲಿರುವ ಅಲೆನ್ ಪ್ರೀಮಿಯರ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಈಚೆಗೆ ನಡೆದ ದುಷ್ಕರ್ಮಿಯೊಬ್ಬನ ಗುಂಡಿನ ದಾಳಿಗೆ ತೆಲಂಗಾಣದ ತಾಟಿಕೊಂಡ ಐಶ್ವರ್ಯಾ ಎಂಬುವವರು ಸಾವಿಗೀಡಾಗಿದ್ದರು. ಐಶ್ವರ್ಯಾ ಅವರ ತಂದೆ ನರಸಿರೆಡ್ಡಿ ರಂಗಾರೆಡ್ಡಿ ಜಿಲ್ಲಾ ಕೋರ್ಟ್​ನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ಶಾಪಿಂಗ್​ ಮಾಲ್​ಗೆ ತೆರಳಿದ್ದಾಗ ಕಪ್ಪು ಕಾರಿನಲ್ಲಿ ಬಂದ ದುಷ್ಕರ್ಮಿ ಅಂಗಡಿಗಳ ಹೊರಗಿನಿಂದ ಗುಂಡಿನ ದಾಳಿ ನಡೆಸಿದ್ದ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ದಾಳಿಕೋರನ ಮೇಲೆ ಪ್ರತಿದಾಳಿ ನಡೆಸಿ ಗಾಯಗೊಳಿಸಿದ್ದರು.

ಇದನ್ನೂ ಓದಿ:ಸುಳ್ಳು ಕೇಸ್ ದಾಖಲಿಸಿದ ಆರೋಪ: ಇಬ್ಬರು ಇನ್ಸ್​​​ಪೆಕ್ಟರ್​​ಗಳ ಅಮಾನತು

ABOUT THE AUTHOR

...view details