ಕರ್ನಾಟಕ

karnataka

ETV Bharat / international

ರಂಜಾನ್​ ಉಪವಾಸ ವೇಳೆ ಆಹಾರ ತಯಾರಿ: ಪಾಕ್​ನಲ್ಲಿ ಹಿಂದುಗಳ ಮೇಲೆ ಪೊಲೀಸ್ ದೌರ್ಜನ್ಯ - police suspended for assaulting Hindus

ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ರಂಜಾನ್​ ಉಪವಾಸದ ಸಂದರ್ಭದಲ್ಲಿ ಆಹಾರ ತಯಾರಿಸಿದರು ಎಂಬ ಕಾರಣಕ್ಕಾಗಿ ಹಿಂದುಗಳ ಮೇಲೆ ಪೊಲೀಸ್​ ಅಧಿಕಾರಿ ಹಲ್ಲೆ ಮಾಡಿ, ಬಂಧಿಸಿದ್ದಾನೆ.

ಪಾಕ್​ನಲ್ಲಿ ಹಿಂದುಗಳ ಮೇಲೆ ಹಲ್ಲೆ ಮಾಡಿದ ಪೊಲೀಸ್
ಪಾಕ್​ನಲ್ಲಿ ಹಿಂದುಗಳ ಮೇಲೆ ಹಲ್ಲೆ ಮಾಡಿದ ಪೊಲೀಸ್

By

Published : Mar 26, 2023, 8:33 AM IST

ಸಿಂಧ್​(ಪಾಕಿಸ್ತಾನ):ಈಗ ಪವಿತ್ರ ರಂಜಾನ್​ ಹಬ್ಬದ ಆಚರಣೆಯ ಸಮಯ. ಮುಸ್ಲಿಮರು ಉಪವಾಸ ಕೈಗೊಂಡು ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ, ಈ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿ ಪೊಲೀಸ್ ಅಧಿಕಾರಿಯೊಬ್ಬ ಹಿಂದುಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪೊಲೀಸ್​ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಘೋಟ್ಕಿ ಜಿಲ್ಲೆಯ ಖಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೆಸ್ಟೋರೆಂಟ್​ನಲ್ಲಿ ಆಹಾರ ತಯಾರು ಮಾಡಲಾಗುತ್ತಿತ್ತು. ಈ ವೇಳೆ ಅಲ್ಲಿಗೆ ಬಂದ ಪೊಲೀಸ್​ ಅಧಿಕಾರಿ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ರಂಜಾನ್​ ಉಪವಾಸದ ವೇಳೆ ಆಹಾರ ತಿನ್ನುತ್ತೀರಾ ಎಂದು ಹೇಳಿ ದೌರ್ಜನ್ಯ ನಡೆಸಿದ್ದಾನೆ. ಆದರೆ, ತಾವು ಹಿಂದುಗಳು ಎಂದು ಅಂಗಡಿಯವರು ಹೇಳಿಕೊಂಡರೂ ಬಿಡದ ಪೊಲೀಸ್ ಅಧಿಕಾರಿ, ಧರ್ಮಗ್ರಂಥದ ಮೇಲೆ ಪ್ರಮಾಣ ಮಾಡಿಸಿದ್ದಾನೆ. ಇದಲ್ಲದೇ, 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾನೆ.

"ನಾವು ಹಿಂದು ಸಮುದಾಯಕ್ಕೆ ಸೇರಿದ್ದೇವೆ. ರಂಜಾನ್​ ಉಪವಾಸ ಮಾಡುವವರಿಗಾಗಿ ಆಹಾರ ಸಿದ್ಧಪಡಿಸುತ್ತಿದ್ದೇವೆ. ಪ್ರಮಾಣ ಮಾಡಿ ಹೇಳಿದರೂ ಅಧಿಕಾರಿ ನಮ್ಮ ಮೇಲೆ ಹಲ್ಲೆ ಮಾಡಿದರು" ಎಂದು ಬಂಧಿತ ಹಿಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಮಾನವ ಹಕ್ಕುಗಳ ಆಯೋಗ ಗರಂ:ವಿಡಿಯೋ ವೈರಲ್ ಆದ ನಂತರ, ಸಿಂಧ್ ಮಾನವ ಹಕ್ಕುಗಳ ಆಯೋಗವು ನೋಟಿಸ್ ಜಾರಿ ಮಾಡಿದೆ. ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಐಜಿ, ಎಸ್‌ಎಸ್‌ಪಿಗೆ ಸೂಚಿಸಿತ್ತು. ಅದರಂತೆ ಹಿಂದೂಗಳಿಗೆ ಕಿರುಕುಳ, ದೌರ್ಜನ್ಯ ಮತ್ತು ಅಕ್ರಮ ಬಂಧನ ಆರೋಪದ ಮೇಲೆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

"ಇದು ಮಾನವನ ಧರ್ಮ ಮತ್ತು ನಂಬಿಕೆಗಳ ಮೇಲಿನ ದೌರ್ಜನ್ಯವಾಗಿದೆ. ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಧಾರ್ಮಿಕ ಆಚರಣೆ ಮತ್ತು ನಿರ್ವಹಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಪಾಕಿಸ್ತಾನದ ಸಂವಿಧಾನದ 20 ನೇ ವಿಧಿಗೆ ವಿರುದ್ಧವಾಗಿದೆ" ಎಂದು ಮಾನವ ಹಕ್ಕುಗಳ ಆಯೋಗ ಹೇಳಿದೆ.

ಪೊಲೀಸ್​ ಅಧಿಕಾರಿಯ ಈ ನಡೆ ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ದೌರ್ಜನ್ಯವಾಗಿದೆ. ಕೋರ್ಟ್​ ನೀಡಿದ ತೀರ್ಪಿನ ವಿರುದ್ಧವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಪೊಲೀಸ್​ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್‌ಎಚ್‌ಆರ್‌ಸಿ ಅಧ್ಯಕ್ಷ ಇಕ್ಬಾಲ್ ಡೆಥೋ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಇಸ್ಲಾಂ ಧರ್ಮದ ಪ್ರಕಾರ, ರಂಜಾನ್ ತಿಂಗಳ ಉಪವಾಸದ ಸಮಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದು, ಕುಡಿಯುವುದು ಮತ್ತು ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಇದಕ್ಕೆಂದೇ ಪಾಕಿಸ್ತಾನದಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಪೊಲೀಸ್​ ಅಧಿಕಾರಿ ರೆಸ್ಟೋರೆಂಟ್​ ಹೊರಭಾಗದಲ್ಲಿ ಆಹಾರ ತಯಾರಿಸುತ್ತಿದ್ದ ಹಿಂದುಗಳ ಮೇಲೆ ಪೊಲೀಸ್​ ಹಲ್ಲೆ ಮಾಡಿದ್ದಾನೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಹಿಂದೂಗಳು ನೆಲೆಸಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಾದ ರಂಜಾನ್ ಸಮಯದಲ್ಲಿ ಪ್ರಪಂಚದಾದ್ಯಂತ ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುತ್ತಾರೆ.

ಹೋಳಿ ಆಚರಣೆ ವೇಳೆ ಹಲ್ಲೆ:ಪಾಕಿಸ್ತಾನದಲ್ಲಿ ಕೆಲ ದಿನಗಳ ಹಿಂದೆ ಹೋಳಿ ಆಚರಣೆ ಮಾಡುತ್ತಿದ್ದ ಹಿಂದು ಯುವಕರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಲಾಹೋರ್​ನ ಪಂಜಾಬ್​​ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿತ್ತು. ಬಣ್ಣ ಹಚ್ಚಿಕೊಂಡು ಸಂಭ್ರಮಾಚಣೆ ಮಾಡುತ್ತಿದ್ದ ಹಿಂದು ಯುವಕರ ಮೇಲೆ ಇಸ್ಲಾಂ ಜಮಿಯತ್​ ತುಲ್ಬಾ ಎಂಬ ಸಂಘಟನೆಗೆ ಸೇರಿದ ಜನರು ದಾಳಿ ಮಾಡಿದ್ದರು.

ಇದನ್ನೂ ಓದಿ:ನೀರಿನ ಬಿಕ್ಕಟ್ಟು.. ಪಾಕಿಸ್ತಾನ ಅಸುರಕ್ಷಿತ ದೇಶ: ಯುಎನ್​ ವರದಿ

ABOUT THE AUTHOR

...view details