ಈಜಿಪ್ಟ್‌ನ ಜನಪ್ರಿಯ ರೆಸಾರ್ಟ್ ಹರ್ಘಾದಾ ಎಂಬಲ್ಲಿ 23 ವರ್ಷದ ರಷ್ಯಾ ದೇಶದ ಪ್ರವಾಸಿಯೊಬ್ಬನನ್ನು ಬೃಹತ್ ಗಾತ್ರದ ಶಾರ್ಕ್ ಮೀನು ಕೊಂದು ತಿಂದಿರುವ ಭೀಕರ ಘಟನೆ ಜರುಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರಿನ ಅಡಿಯಲ್ಲಿದ್ದ ಶಾರ್ಕ್ ಹಲವಾರು ಬಾರಿ ವ್ಯಕ್ತಿಯನ್ನು ಎಳೆದಿದೆ. ಆತ ಸಹಾಯಕ್ಕಾಗಿ ತನ್ನ ತಂದೆಯನ್ನು ಕಿರುಚಿ ಕರೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವ್ಲಾಡಿಮಿರ್ ಪೊಪೊವ್ ಎಂಬ ವ್ಯಕ್ತಿ ಗುರುವಾರ ಈಜಲು ಹೋಗಿದ್ದಾಗ ಟೈಗರ್ ಶಾರ್ಕ್ಗೆ ಆಹಾರವಾಗಿದ್ದಾನೆ. ಈ ಘಟನೆ ಕಂಡು ದಿಗ್ಭ್ರಮೆಗೊಂಡ ಆತನ ಗೆಳತಿಯು ಮೀನಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಮಗನ ರಕ್ಷಿಸಲಾಗದೇ ಅಸಹಾಯಕನಾಗಿ ನಿಂತಿದ್ದ ತಂದೆ :ವ್ಲಾಡಿಮಿರ್ ತನ್ನ ತಂದೆಯೊಂದಿಗೆ ಕೆಲವು ತಿಂಗಳುಗಳ ಹಿಂದೆ ರೆಸಾರ್ಟ್‌ಗೆ ಬಂದಿದ್ದ. ಶಾರ್ಕ್ ಮಾರಣಾಂತಿಕ ದಾಳಿಯನ್ನು ಆತನ ತಂದೆ ಭಯಭೀತರಾಗಿ ವೀಕ್ಷಿಸಿದ್ದಾರೆ. ಕಣ್ಣೆದುರೇ ಮಗ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದಾಗ ಆತನನ್ನು ರಕ್ಷಿಸಲಾಗದೇ ಅಸಹಾಯಕರಾಗಿಯೇ ನಿಂತಿದ್ದರು.
ಇದನ್ನೂ ಓದಿ :Whale Shark : ಮೀನುಗಾರರ ಬಲೆಯಲ್ಲಿ ಸಿಲುಕಿದ್ದ ವಿಶ್ವದ ಅತಿ ದೊಡ್ಡ ಮೀನಿನ ರಕ್ಷಣೆ
ವಿಡಿಯೋದಲ್ಲೇನಿದೆ? : ಪ್ರವಾಸಿಗನನ್ನು ಶಾರ್ಕ್ ಎಳೆದಾಡುತ್ತಿರುವ ದೃಶ್ಯವನ್ನು ತೀರದಿಂದ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ, ಮೀನಿನ ದಾಳಿಯ ನಂತರ ನೀರು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದಂತೆ ಅವನು 'ಪಾಪಾ' ಎಂದು ಕಿರುಚುವುದನ್ನು ಕೇಳಬಹುದು. ಹಾಗೆಯೇ, ಹಿಂಬದಿ ನಿಂತಿದ್ದ ಒಬ್ಬ ಮಹಿಳೆ "ಓ ಮೈ ಗಾಡ್, ಓ ಮೈ ಗಾಡ್.." ಎಂದು ಹೇಳುತ್ತಿರುವುದು ಕೇಳಿಸುತ್ತದೆ.