ಒಟ್ಟಾವಾ(ಕೆನಡಾ):ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ವಾರಗಳ ಹಿಂದೆ ಭಾರತದ ಜೊತೆ ಹಂಚಿಕೊಂಡಿದ್ದೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಶುಕ್ರವಾರ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರುಡೊ, "ಭಾರತದೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡಲು ನಾವು ಅಲ್ಲಿದ್ದೇವೆ. ಅವರು ನಮ್ಮೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಇದರಿಂದ ನಾವು ಈ ಕುರಿತು ಗಂಭೀರ ವಿಷಯದ ತಳಹದಿಯನ್ನು ಪಡೆಯಬಹುದು" ಎಂದರು.
ಆರೋಪಗಳು ಅಸಂಬದ್ಧ ಎಂದ ಭಾರತ: ಸೆ.18 ರಂದು, ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಟ್ರುಡೊ ಆರೋಪಿಸಿದ್ದರು. ಇದು ಉಭಯ ದೇಶಗಳ ನಡುವೆ ಉದ್ವಿಗ್ನತೆಯನ್ನು ಉಂಟು ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ, ಅವರ ಆರೋಪವನ್ನು 'ಅಸಂಬದ್ಧ' ಮತ್ತು 'ಪ್ರಚೋದಿತ' ಎಂದು ತಿರುಗೇಟು ನೀಡಿತ್ತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಇಎ ಪತ್ರಿಕಾ ಪ್ರಕಟಣೆಯಲ್ಲಿ "ನಾವು ತಮ್ಮ ಸಂಸತ್ತಿನಲ್ಲಿ ಕೆನಡಾದ ಪ್ರಧಾನಿಯವರ ಹೇಳಿಕೆಯನ್ನು ಮತ್ತು ಅವರ ವಿದೇಶಾಂಗ ಸಚಿವರ ಹೇಳಿಕೆಯನ್ನು ಗಮನಿಸಿದ್ದೇವೆ. ಆದರೆ ಕೆನಡಾದಲ್ಲಿ ನಡೆದ ಯಾವುದೇ ಹಿಂಸಾಚಾರದಲ್ಲಿ ಭಾರತ ಸರ್ಕಾರವು ಭಾಗಿಯಾಗಿದೆ ಎಂಬ ಆರೋಪಗಳು ಅಸಂಬದ್ಧ" ಎಂದು ಹೇಳಿದೆ.
ಗಂಭೀರ ಆರೋಪಗಳ ನಡುವೆ ಉಭಯ ದೇಶಗಳು (ಭಾರತ ಮತ್ತು ಕೆನಡಾ) ರಾಯಭಾರಿಗಳನ್ನು ಉಚ್ಛಾಟನೆ ಮಾಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ "ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಹಿಂದೆ ಭಾರತದ ಸಂಭಾವ್ಯ ಸಂಬಂಧ ಕುರಿತು ಕೆನಡಾ ಮಾಡಿರುವ ಆರೋಪಗಳು ರಾಜಕೀಯ ಪ್ರೇರೇಪಿತವಾಗಿದೆ" ಎಂದು ಹೇಳಿದ್ದಾರೆ.
ಮಾಹಿತಿ ಹಂಚಿಕೊಂಡಿಲ್ಲ ಎಂದ ಎಂಇಎ: ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. "ನಮಗೆ ಒದಗಿಸಲಾದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೋಡಲು ನಾವು ಸಿದ್ಧರಿದ್ದೇವೆ. ಆದರೆ ಈವರೆಗೆ ನಾವು ಕೆನಡಾದಿಂದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಸ್ವೀಕರಿಸಿಲ್ಲ" ಎಂದು ಅರಿಂದಮ್ ಬಾಗ್ಚಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನ್ಯೂಯಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆನಡಾದ ಪ್ರಧಾನಿ ತಮ್ಮ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ವಿಫಲರಾದರು. ಆರೋಪಗಳ ಸ್ವರೂಪದ ಬಗ್ಗೆ ಟ್ರೂಡೊ ಪದೇ ಪದೇ ಪ್ರಶ್ನಿಸಲ್ಪಟ್ಟರು. ಆದರೂ ಕೆನಡಾದ ನೆಲದಲ್ಲಿ ಕೆನಡಾದವರ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಹೇಳಲು ನಂಬಲರ್ಹವಾದ ಕಾರಣಗಳಿವೆ ಎಂದು ಪುನರುಚ್ಚರಿಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಮತ್ತು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ನಮ್ಮೊಂದಿಗೆ ಕೆಲಸ ಮಾಡಲು ನಾವು ಭಾರತ ಸರ್ಕಾರಕ್ಕೆ ಕರೆ ನೀಡುತ್ತೇವೆ. ಈ ವಿಷಯದ ಬಗ್ಗೆ ತಾನು ಪ್ರಧಾನಿ ಮೋದಿಯವರೊಂದಿಗೆ ಮುಕ್ತ ಸಂಭಾಷಣೆ ನಡೆಸಿದ್ದೇನೆ ಎಂದು ಅವರು ಹೇಳಿದರು.
ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಭಾರತದಿಂದ ನಿಷೇಧಿಸಲ್ಪಟ್ಟ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕ. ಈತನನ್ನು ಕಳೆದ ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು.
ಇದನ್ನೂ ಓದಿ:ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಪ್ರಧಾನಿ ಟ್ರುಡೊ 'ನಿರ್ಲಜ್ಜ ಕ್ರಮ': ಯುಎಸ್ ತಜ್ಞರ ಅಭಿಪ್ರಾಯ