ಬೀಜಿಂಗ್(ಚೀನಾ) : ಕೊರೊನಾ ಸೋಂಕು ಮತ್ತೆ ಚೀನಾದಲ್ಲಿ ಆರ್ಭಟ ಮುಂದುವರೆಸಿದೆ. ಶೂನ್ಯ ಕೋವಿಡ್ ನಿಯಮವನ್ನು ಅನುಸರಿಸಿರುವ ಚೀನಾ ಕಠಿಣ ಲಾಕ್‌ಡೌನ್ ಅನ್ನು ಕೆಲವು ನಗರಗಳಲ್ಲಿ ಜಾರಿಗೆ ತಂದಿದೆ. ಅತಿ ದೊಡ್ಡ ವಾಣಿಜ್ಯ ನಗರಗಳಲ್ಲಿ ಒಂದಾದ ಶಾಂಘೈನಲ್ಲೂ ಅತ್ಯಂತ ಕಠಿಣವಾದ ಲಾಕ್‌ಡೌನ್ ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಭಯಾನಕ ವಿಡಿಯೋಗಳು ವೈರಲ್ ಆಗುತ್ತಿವೆ. ಅವುಗಳನ್ನು ನೋಡಿದರೆ ಎದೆ ಝೆಲ್ಲೆನ್ನುವುದು ಖಚಿತ.
ಲೇಖಕರಾಗಿರುವ ಪ್ಯಾಟ್ರಿಕ್ ಮ್ಯಾಡ್ರಿಡ್ ಎಂಬುವವರು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಲಾಕ್ಡೌನ್ನಲ್ಲಿ ಶಾಂಘೈನಲ್ಲಿ ಜನರು ಕಟ್ಟಡಗಳಲ್ಲಿ ನಿರ್ಬಂಧಿಸಲಾಗಿದೆ. ಜನರು ಕಟ್ಟಡಗಳಿಂದ ಕಿರುಚುತ್ತಿದ್ದಾರೆ. ಸಹಾಯಕ್ಕಾಗಿ ಕೂಗುವುದು ಮಾತ್ರವಲ್ಲದೇ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಕಟ್ಟಡಗಳಿಂದ ಹೊರಗೆ ಬರಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚೀನಾದಲ್ಲಿ ಕೊರೊನಾ ಸೋಂಕು ಸೃಷ್ಟಿಸಿರುವ ಸನ್ನಿವೇಶವನ್ನು ಉಲ್ಲೇಖಿಸಿದ್ದಾರೆ. ಆಸ್ಟ್ರೇಲಿಯಾದ ನ್ಯೂಸ್ ವೆಬ್ಸೈಟ್ ಆದ news.com.au ಕೂಡಾ ಈ ವಿಡಿಯೋವನ್ನು ಹಂಚಿಕೊಂಡಿದೆ.