ಸಾವೊ ಪಾಲೊ, ಬ್ರೆಜಿಲ್:ಬ್ರೆಜಿಲ್ಗೆ ಚಳಿಗಾಲದ ಚಂಡಮಾರುತ ಅಪ್ಪಳಿಸಿದೆ. ಚಂಡಮಾರುತದ ಭೀಕರತೆಗೆ ಮೂವರು ಸಾವನ್ನಪ್ಪಿದ್ದು, 12 ಜನರು ಕಾಣೆಯಾಗಿದ್ದಾರೆ. ಅಲ್ಲಲ್ಲಿ ಮರಗಳು ಬಿದ್ದಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಅಷ್ಟೇ ಅಲ್ಲ ಕೆಲವೊಂದು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದು ವರದಿಯಾಗಿದೆ.
ಚಳಿಗಾಲದ ಚಂಡಮಾರುತವು ಈ ಪ್ರದೇಶಕ್ಕೆ ಅಪ್ಪಳಿಸಿದ ನಂತರ ಮೂರು ಜನರು ಸಾವನ್ನಪ್ಪಿದ್ದು, ಪ್ರಸ್ತುತ 12 ಮಂದಿ ಕಾಣೆಯಾಗಿದ್ದಾರೆ ಎಂದು ದಕ್ಷಿಣ ಬ್ರೆಜಿಲ್ ರಾಜ್ಯದ ರಿಯೊ ಗ್ರಾಂಡೆ ಡೊ ಸುಲ್ ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ. ಸಾವೊ ಲಿಯೋಪೋಲ್ಡೊ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದು, ರಾಜ್ಯದ ಕರಾವಳಿಯಲ್ಲಿರುವ ಮ್ಯಾಕ್ವಿನ್‌ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಗವರ್ನರ್ ಎಡ್ವರ್ಡೊ ಲೈಟ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನಗರಕ್ಕೆ ಚಂಡಮಾರತ ಅಪ್ಪಳಿಸಿದೆ. ಈ ಸಮಯದಲ್ಲಿ ನಾವು ಕಾಣೆಯಾದವರನ್ನು ಪತ್ತೆ ಮಾಡುವುದು ಮತ್ತು ಪ್ರವಾಹದಿಂದಾಗಿ ಇನ್ನೂ ಪ್ರತ್ಯೇಕವಾಗಿರುವ ಜನರನ್ನು ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಲೈಟ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅಧ್ಯಕ್ಷ ಲೂಯಿಜ್ ಇನ್ಸಿಯೊ ಲುಲಾ ಡಾ ಸಿಲ್ವಾ ಬಿಕ್ಕಟ್ಟನ್ನು ನಿಭಾಯಿಸಲು ಫೆಡರಲ್ ಸಹಾಯ ಹಸ್ತ ಚಾಚಿದೆ ಎಂದು ಹೇಳಿದರು.
ಚಂಡಮಾರುತದ ಭೀಕರತೆಯನ್ನು ಅರಿತ ರಾಜ್ಯ ಸರ್ಕಾರ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತು. ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಇನ್ನೂ ಹಲವಾರು ರಸ್ತೆಗಳನ್ನು ನಿರ್ಬಂಧಿಸಲಾಯಿತು. ರಾಜ್ಯದ ಪ್ರಮುಖ ನಗರಗಳಿಗೆ ವಿಮಾನಗಳನ್ನು ದಿನವಿಡೀ ರದ್ದುಗೊಳಿಸಲಾಯಿತು. ರಾಜ್ಯದಾದ್ಯಂತ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿತ್ತು. ಹೀಗೆ ತಾವು ತೆಗೆದುಕೊಂಡ ತಾತ್ಕಲಿಕ ನಿರ್ಣಯದಿಂದ ಕೆಲವೊಂದು ಸಂಭವಿಸಬೇಕಾದ ಅವಘಡಗಳು ತಪ್ಪಿದಂತಾಗಿದೆ.