ಖೈಬರ್ ಪಖ್ತುಂಖ್ವಾ, ಪಾಕಿಸ್ತಾನ: ಗುರುವಾರ ವಾಯುವ್ಯ ಪಾಕಿಸ್ತಾನದಲ್ಲಿ ಭದ್ರತಾ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ಬೈಕ್ನಲ್ಲಿ ಸವಾರಿ ಮಾಡುತ್ತಿದ್ದ ಆತ್ಮಾಹುತಿ ಬಾಂಬರ್ ಕನಿಷ್ಠ ಒಂಬತ್ತು ಸೈನಿಕರನ್ನು ಬಲಿ ಪಡೆದಿದ್ದಾನೆ. ಈ ದಾಳಿಯಲ್ಲಿ ಯೋಧರು ಸೇರಿದಂತೆ 20 ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಈ ಆತ್ಮಾಹುತಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಮತ್ತು ಸ್ಥಳೀಯ ಮಾಧ್ಯಮಗಳ ಪ್ರಕಾರ, ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ. ಆದರೆ, ಪಾಕಿಸ್ತಾನಿ ತಾಲಿಬಾನ್ ಈ ದಾಳಿಯನ್ನು ನಡೆಸಿದೆ ಎಂದು ಶಂಕಿಸಲಾಗಿದೆ. ಪಾಕಿಸ್ತಾನಿ ತಾಲಿಬಾನ್ 2022 ರಿಂದ ಭದ್ರತಾ ಪಡೆಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿರುವುದು ಗಮನಾರ್ಹ.
ಬೈಕ್ ಮೂಲಕ ಆತ್ಮಹುತಿ ದಾಳಿ: ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯ ಜಾನಿ ಖೇಲ್ ಜನರಲ್ ಪ್ರದೇಶದಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ಒಂಬತ್ತು ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 20 ಯೋಧರು ಗಾಯಗೊಂಡಿದ್ದಾರೆ. ಸೇನೆಯ ಮಾಧ್ಯಮ ವ್ಯವಹಾರಗಳ ವಿಭಾಗವನ್ನು ಉಲ್ಲೇಖಿಸಿ ಮಾಧ್ಯಮಗಳು ಈ ಮಾಹಿತಿ ನೀಡಿವೆ. ಇಂಟರ್ - ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ನೀಡಿದ ಹೇಳಿಕೆಯ ಪ್ರಕಾರ, ಬೈಕ್ನಲ್ಲಿ ಬಂದ ಆತ್ಮಹತ್ಯಾ ಬಾಂಬರ್ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಆತ್ಮಹುತಿ ದಾಳಿ ನಡೆಸಿದರು ಎಂದು ಹೇಳಿದೆ.
ಭಯೋತ್ಪಾದಕರ ನಿರ್ಮೂಲನೆಗೆ ಕ್ರಮ: ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ದಾಳಿಯಲ್ಲಿ ನೈಬ್ ಸುಬೇದಾರ್ ಸನೋಬರ್ ಅಲಿ ಸೇರಿದಂತೆ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 20 ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಿವೆ. ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಐಎಸ್‌ಪಿಆರ್ ತಿಳಿಸಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದು ಹಾಕಲು ನಿರ್ಧರಿಸಿವೆ ಮತ್ತು ನಮ್ಮ ವೀರ ಸೈನಿಕರ ಇಂತಹ ತ್ಯಾಗಗಳು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಸಂತಾಪ:ಇನ್ನು ಈ ದಾಳಿಯನ್ನು ಪ್ರಧಾನಿ ಅನ್ವರುಲ್ ಹಕ್ ಕಾಕರ್ ಅವರು ಖಂಡಿಸಿದ್ದಾರೆ ಮತ್ತು ಸೈನಿಕರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ವರದಿಗಳ ಪ್ರಕಾರ, ಕಳೆದ ನವೆಂಬರ್‌ನಲ್ಲಿ ನಿಷೇಧಿತ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಜೊತೆಗಿನ ಕದನ ವಿರಾಮ ಕೊನೆಗೊಂಡ ನಂತರ ಪಾಕಿಸ್ತಾನದಲ್ಲಿ ವಿಶೇಷವಾಗಿ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ.
ಈ ಹಿಂದೆ ನಡೆದಿತ್ತು ಭಯೋತ್ಪಾದಕರ ದಾಳಿ: ಮಾಹಿತಿ ಪ್ರಕಾರ, ಆಗಸ್ಟ್ 22 ರಂದು ದಕ್ಷಿಣ ವಜಿರಿಸ್ತಾನ್ ಜಿಲ್ಲೆಯಲ್ಲಿ ಆರು ಸೈನಿಕರು ಹುತಾತ್ಮರಾಗಿದ್ದರು. ಬಲೂಚಿಸ್ತಾನದ ಝೋಬ್ ಮತ್ತು ಸುಯಿ ಪ್ರದೇಶಗಳಲ್ಲಿ ನಡೆದ ಪ್ರತ್ಯೇಕ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆಯ ಸುಮಾರು 12 ಯೋಧರು ಹುತಾತ್ಮರಾಗಿದ್ದರು. ಸೇನೆಯ ಮೇಲೆ ಭಯೋತ್ಪಾದಕರ ದಾಳಿಯಿಂದಾಗಿ ಒಂದೇ ದಿನದಲ್ಲಿ ಸಂಭವಿಸಿದ ಅತಿ ಹೆಚ್ಚು ಸಾವು ಇದಾಗಿತ್ತು. ಇದಕ್ಕೂ ಮೊದಲು, ಫೆಬ್ರವರಿ 2022 ರಲ್ಲಿ, ಬಲೂಚಿಸ್ತಾನದ ಕೆಚ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಸೈನಿಕರು ಹುತಾತ್ಮರಾಗಿದ್ದರು.
ಓದಿ:ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಎರಡು ಗುಂಪುಗಳ ನಡುವೆ ಗುಂಡಿನ ದಾಳಿ.. 72 ಗಂಟೆಯಲ್ಲಿ 8 ಸಾವು, 18 ಜನರಿಗೆ ಗಾಯ!