ಸುಡಾನ್ : ಪೋರ್ಟ್ ಸುಡಾನ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನವೊಂದು ಅಪಘಾತಕ್ಕೀಡಾಗಿದ್ದು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಡಾನ್ ಸಶಸ್ತ್ರ ಪಡೆ ತಿಳಿಸಿದೆ. ಇಲ್ಲಿನ ಸೇನೆ ಮತ್ತು ಅರೆಸೇನಾಪಡೆಯ ನಡುವಿನ ಅಂತರ್ಯುದ್ದ ಭಾನುವಾರ 100ನೇ ದಿನ ತಲುಪುತ್ತಿದ್ದಂತೆ ಈ ಅವಘಡ ಸಂಭವಿಸಿದೆ.
ನಿನ್ನೆ ಸಂಜೆ ವೇಳೆಗೆ ವಿಮಾನ ಪತನಗೊಂಡಿದೆ. ಟೇಕ್-ಆಫ್ ಸಮಯದಲ್ಲಿ ಕಂಡು ಬಂದ ತಾಂತ್ರಿಕ ದೋಷವೇ ಕಾರಣ ಎಂದು ಸೇನಾ ವಕ್ತಾರರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮೃತಪಟ್ಟ ಒಂಬತ್ತು ಮಂದಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿ. ಓರ್ವ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸೂಡಾನ್ ಹಿಂಸಾಚಾರದಲ್ಲಿ ಇದುವರೆಗೆ 1,136 ಮಂದಿ ಸಾವು :ಈ ವರ್ಷದ ಏಪ್ರಿಲ್ 15 ರಿಂದ ರಾಜಧಾನಿ ಖಾರ್ಟೂಮ್ ಮತ್ತು ಇತರೆ ಪ್ರದೇಶಗಳಲ್ಲಿ ಸುಡಾನ್ ಸೇನೆ ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಭೀಕರ ಸಂಘರ್ಷ ನಡೆಯುತ್ತಿದೆ. ಈ ಅಂತರ್ ಯುದ್ದವು ಭಾನುವಾರ (ನಿನ್ನೆ) 100ನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತು ಸುಡಾನ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಇದುವರೆಗೆ ಹಿಂಸಾಚಾರದಲ್ಲಿ ಕನಿಷ್ಠ 1,136 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಹಾಗೆಯೇ, ಸುಮಾರು 3 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸುಡಾನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ನೆರೆ ದೇಶಗಳಾದ ಈಜಿಪ್ಟ್, ಚಾಡ್ ಮತ್ತು ದಕ್ಷಿಣ ಸುಡಾನ್‌ಗೆ ಪಲಾಯನಗೈದಿದ್ದಾರೆ.
ಇದನ್ನೂ ಓದಿ :Sudan War : ಒಮಡ್ರುಮನ್ ನಗರದ ಮೇಲೆ ವೈಮಾನಿಕ ದಾಳಿ; 22 ಜನರು ಸಾವು