ಟೊಪ್ಪೆನಿಶ್ (ವಾಷಿಂಗ್ಟನ್):ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಗುರುವಾರ 19 ವರ್ಷದ ವ್ಯಕ್ತಿಯೊಬ್ಬ ನಾಲ್ವರಿಗೆ ಗುಂಡು ಹಾರಿಸಿ, ಮೂವರನ್ನು ಕೊಂದು ಹಾಕಿದ್ದಾನೆ. ಮೂವರನ್ನು ಶೂಟ್ ಮಾಡಿದ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ವಾಷಿಂಗ್ಟನ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಟೊಪ್ಪೆನಿಶ್‌ನ ಮನೆಯೊಂದರಲ್ಲಿ ಮುಂಜಾನೆ 5 ಗಂಟೆಗೆ ವ್ಯಕ್ತಿಯೊನ್ನ 13 ವರ್ಷದ ಬಾಲಕ, 18 ವರ್ಷದ ಯುವತಿ ಮತ್ತು 21 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಟೊಪ್ಪೆನಿಶ್ ಪೊಲೀಸ್ ಮುಖ್ಯಸ್ಥ ಜಾನ್ ಕ್ಲಾರಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 21 ವರ್ಷದ ಯುವಕನ ಮೇಲೆ ಗುಂಡು ಹಾರಿಸಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿ ನಡೆಸಿ ಮೂವರನ್ನು ಕೊಂದು, ಒಬ್ಬನನ್ನು ಗಾಯಗೊಳಿಸಿದ 19 ವರ್ಷದ ಹಂತಕ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟೊಪ್ಪೆನಿಶ್ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈತ ಯಾಕೆ ದಾಳಿ ಮಾಡಿದ, ಈ ಹಿಂದೆ ಇವರ ಮೇಲೆ ದ್ವೇಷ ಇತ್ತಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ದುರಂತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಇಲಾಖೆ ಸನ್ನದ್ಧವಾಗಿದೆ. ಪ್ರಾದೇಶಿಕ ಕಾನೂನು ಜಾರಿ ಪಾಲುದಾರರ ಸಹಯೋಗದೊಂದಿಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಕ್ಲಾರಿ ಇದೆ ವೇಳೆ ಸ್ಪಷ್ಟನೆ ಕೂಡಾ ನೀಡಿದ್ದಾರೆ. ಟೊಪ್ಪೆನಿಶ್ ಪಟ್ಟಣ ಸುಮಾರು 8,600 ಜನರ ಜನಸಂಖ್ಯೆಯನ್ನು ಹೊಂದಿದೆ. ಇದು ಯಕಾಮಾ ಭಾರತೀಯ ಮೀಸಲು ನಗರವಾಗಿದೆ ಎಂಬುದು ವಿಶೇಷ.