ಇಸ್ಲಾಮಾಬಾದ್ : ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಚುನಾವಣೆ ನಡೆಸಲು ಅಗತ್ಯವಾದ ಹಣ ಬಿಡುಗಡೆ ಮಾಡಲು ವಿಫಲವಾದರೆ “ಗಂಭೀರ ಪರಿಣಾಮ” ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನದ ಸುಪ್ರೀಂಕೋರ್ಟ್ ಬುಧವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಾಷ್ಟ್ರೀಯ ಅಸೆಂಬ್ಲಿ ಹಾಗೂ ಸಿಂಧ್ ಮತ್ತು ಬಲೂಚಿಸ್ತಾನ್ ಅಸೆಂಬ್ಲಿಗಳ ಅವಧಿ ಮುಗಿದ ನಂತರ ಏಕಕಾಲದಲ್ಲಿ ಪಾಕಿಸ್ತಾನದಾದ್ಯಂತ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವಂತೆ ರಕ್ಷಣಾ ಸಚಿವಾಲಯದ ಮನವಿಯನ್ನು ಆಲಿಸಿದ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಇಜಾಜುಲ್ ಅಹ್ಸಾನ್ ಮತ್ತು ನ್ಯಾಯಮೂರ್ತಿ ಮುನಿಬ್ ಅಖ್ತರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಇದಕ್ಕೂ ಹಿಂದಿನ ದಿನ ರಕ್ಷಣಾ ಸಚಿವಾಲಯವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಮೇ 14 ರಂದು ಪಂಜಾಬ್ ಅಸೆಂಬ್ಲಿಗೆ ಚುನಾವಣೆ ನಡೆಸಬೇಕು ಎಂದು ನಿಗದಿಪಡಿಸಿದ ಏಪ್ರಿಲ್ 4 ರ ಆದೇಶವನ್ನು ಹಿಂಪಡೆಯಬೇಕು ಎಂದು ರಕ್ಷಣಾ ಸಚಿವಾಲಯ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತು.
ರಾಷ್ಟ್ರೀಯ ಮತ್ತು ಎಲ್ಲ ಪ್ರಾಂತೀಯ ಅಸೆಂಬ್ಲಿಗಳಿಗೆ ಸಾರ್ವತ್ರಿಕ ಚುನಾವಣೆಗಳನ್ನು ಒಂದೇ ದಿನಾಂಕದಂದು ನಡೆಸುವಂತೆ ನಿರ್ದೇಶನಗಳನ್ನು ನೀಡುವಂತೆ ಅದು ಸುಪ್ರೀಂಕೋರ್ಟ್‌ಗೆ ಕೇಳಿದೆ. ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ಚುನಾವಣೆ ನಡೆಸಲು 21 ಬಿಲಿಯನ್ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಮತ್ತು ಇತರ ಇಲಾಖೆಗಳಿಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪರಿಪಾಲನೆಯ ಬಗೆಗಿನ ವರದಿಯನ್ನು ಸಹ ಅರ್ಜಿಯ ಜೊತೆಗೆ ಸಲ್ಲಿಸಲಾಯಿತು.