ರೇಕ್‌ಜಾನೆಸ್ (ಐಸ್‌ಲ್ಯಾಂಡ್) :ಸತತ ಭೂಕಂಪ ಮತ್ತು ಜ್ವಾಲಾಮುಖಿಯಿಂದಾಗಿ ಜನರನ್ನು ರಕ್ಷಿಸಲು ಐಸ್‌ಲ್ಯಾಂಡ್ ಸರ್ಕಾರ ರೇಕ್‌ಜಾನೆಸ್ ಪೆನಿನ್ಸುಲಾದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಗ್ರಿಂಡಾವಿಕ್ ನಗರದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಐಸ್‌ಲ್ಯಾಂಡಿಕ್ ಮೆಟ್ ಆಫೀಸ್ (ಐಎಂಒ) ಸೂಚಿಸಿದೆ.
ಭೂಕಂಪನಗಳ ಸೂಚನೆಯಿಂದಾಗಿ ಐಸ್‌ಲ್ಯಾಂಡ್‌ನ ನಾಗರಿಕ ರಕ್ಷಣೆ ಮತ್ತು ತುರ್ತು ನಿರ್ವಹಣಾ ಇಲಾಖೆಯು ರೇಕ್‌ಜಾನೆಸ್ ಪರ್ಯಾಯ ದ್ವೀಪದಲ್ಲಿ ತುರ್ತು ಸ್ಥಳಾಂತರಕ್ಕೆ ತಾಕೀತು ಮಾಡಿದ್ದಲ್ಲದೇ, ಖಾಸಗಿ ಸಂಘ ಸಂಸ್ಥೆಗಳೊಂದಿಗೆ ಜನರ ರಕ್ಷಣೆಗೆ ಕೈ ಜೋಡಿಸಿದೆ.
ಗ್ರಿಂಡಾವಿಕ್‌ನ ಉತ್ತರದ ಸುಂಧ್‌ಜುಕಾಗಿಗರ್ ಬಳಿ ತೀವ್ರ ಭೂಕಂಪನದ ಎಚ್ಚರಿಕೆ ನೀಡಲಾಗಿದೆ. ಶನಿವಾರ ಮಧ್ಯಾಹ್ನ ರೇಕ್‌ಜಾನೆಸ್ ಪೆನಿನ್ಸುಲಾದಲ್ಲಿ ಭೂಮಿ ನಡುಗುವ ಭೀತಿ ಇದ್ದು, ಭೂ ಅಂತರಾಳದಲ್ಲಿ ಚಟುವಟಿಕೆಗಳ ಮೇಲೆ ಗಮನ ಇಡಲಾಗಿದೆ. ಗ್ರಿಂಡಾವಿಕ್ ಕಡೆಗೆ ಕಂಪನಗಳು ಚಲಿಸುತ್ತಿವೆ. ಜಿಪಿಎಸ್ ಮಾಪನಗಳು ಮತ್ತು ಅದರ ಮಾಹಿತಿ ಆಧಾರದ ಮೇಲೆ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಲಾಪಾಕದ ಚಲನೆ ಹೆಚ್ಚಳ:ಭೂಗರ್ಭದಲ್ಲಿನ ಜ್ವಾಲೆಗಳು ಯಾವ ಭಾಗದಲ್ಲಿ ಸಿಡಿಯುತ್ತವೆ ಎಂಬುದನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಸುಂಧ್‌ಜುಕಾಗಿಗಮ್‌ನಿಂದ ಗ್ರಿಂಡವಿಕ್ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಲಾಪಾಕ ಚಲಿಸುತ್ತಿದೆ ಎಂಬ ಸೂಚನೆಗಳಿವೆ. ಲಾವಾರಸ ಧಾವಿಸುತ್ತಿರುವ ಪ್ರಮಾಣ ಮತ್ತು ಹಾದಿಗೆ ಅನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು. 2021 ರಲ್ಲಿ ನಡೆದ ಭೂಕಂಪನ ಆಧಾರದ ಮೇಲೆ ಜ್ವಾಲಾಮುಖಿ ಭೂಮಿಯ ಮೇಲೆ ಚಿಮ್ಮಲು ಇನ್ನಷ್ಟು ದಿನಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ.