ಅಬುಜಾ (ನೈಜೀರಿಯಾ):ದಕ್ಷಿಣ ನೈಜೀರಿಯಾದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಮಕ್ಕಳು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತವೊಂದರಲ್ಲಿ 11 ಮಂದಿಯ ಮೃತದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದ್ದವು. ಇನ್ನೊಂದು ಅಪಘಾತದಲ್ಲಿ ಕಂಟೇನರ್‌ವೊಂದು ಬಸ್ ಮೇಲೆ ಉರುಳಿ ಬಿದ್ದು 9 ಜನರು ಸಾವನ್ನಪ್ಪಿದ್ದಾರೆ.
ಬಸ್ ಮೇಲೆ ಬಿದ್ದ ಕಂಟೇನರ್: ನೈಜೀರಿಯಾದ ಓಜುಲೆಗ್ಬಾದ ಜನನಿಬಿಡ ಸೇತುವೆಯ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಸೇತುವೆಯ ಕೆಳಗೆ ಹಳದಿ ಬಣ್ಣದ ಮಿನಿ ಬಸ್ನಲ್ಲಿ ಸುಮಾರು 10 ಜನ ಪ್ರಯಾಣಿಸುತ್ತಿದ್ದರು. ಸೇತುವೆ ಮೇಲೆ ಟ್ರಕ್ವೊಂದು ಕಂಟೇನರ್ವೊಂದನ್ನು ಹೊತ್ತು ಸಾಗುತ್ತಿತ್ತು. ಟ್ರಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿದೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಚಾಲಕ ಸೇರಿದಂತೆ ಒಂಬತ್ತು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ಬಸ್ ಮೇಲೆ ಬಿದ್ದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾದರು. ಆದ್ರೆ ಸ್ಥಳೀಯರಿಗೆ ಬಸ್ ಮೇಲೆ ಬಿದ್ದ ಕಂಟೇನರ್ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿ ಬರುವವರೆಗೂ ಕಾಯಬೇಕಾಯಿತು. ಸುದ್ದಿ ತಿಳಿದ ತಕ್ಷಣವೇ ಅಧಿಕಾರಿಗಳು ರಕ್ಷಣಾ ಸಾಧನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದರು. ಬಳಿಕ, 20 ಅಡಿ ಕಂಟೇನರ್ ಅನ್ನು ತೆಗೆದು ಮೃತ ಪ್ರಯಾಣಿಕರನ್ನು ಹೊರತೆಗೆದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್, ದುರಂತದಲ್ಲಿ ಮಹಿಳೆಯೊಬ್ಬಳು ಮಾತ್ರ ಬದುಕುಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.