ಜೆರುಸಲೇಂ:ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್ ಸೇನೆ ವೈಮಾನಿಕ ದಾಳಿ ಮುಂದುವರೆಸಿದೆ. ಈ ದಾಳಿಗಳಲ್ಲಿ ಹಮಾಸ್‌ನ ಪ್ರಮುಖ ಕಮಾಂಡರ್‌ಗಳ ಹತ್ಯೆ ಮಾಡಲಾಗಿದೆ ಎಂದು ಸೇನೆ ಘೋಷಿಸಿತು. ಇತ್ತೀಚಿನ ದಾಳಿಯಲ್ಲಿ ಪ್ರಮುಖ ಕಮಾಂಡರ್ ಮತ್ತು ಮೂವರು ಹಿರಿಯ ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಗುಪ್ತಚರ ಮೂಲಗಳ ಪ್ರಕಾರ, ಹಮಾಸ್‌ನ ದರಾಜ್ ತುಫಾ ಬೆಟಾಲಿಯನ್‌ಗೆ ಸೇರಿದ ಮೂವರು ಪ್ರಮುಖ ಆಪರೇಟರ್‌ಗಳು ತಮ್ಮ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು IDF ಬಹಿರಂಗಪಡಿಸಿದೆ. ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ಹತ್ಯಾಕಾಂಡದಲ್ಲಿ ಈ ಬೆಟಾಲಿಯನ್ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಲಾಗುತ್ತಿದೆ. ಇದು ಅತ್ಯಂತ ಪ್ರಮುಖ ಬ್ರಿಗೇಡ್ ಆಗಿದೆ. ಇದಕ್ಕೂ ಮೊದಲು, ಹಮಾಸ್ ಗುಪ್ತಚರ ನಿರ್ದೇಶನಾಲಯದ ಉಪ ಮುಖ್ಯಸ್ಥ ಶಾದಿ ಬರೂದ್ ಅವರು ಗುರುವಾರ ಬೆಳಿಗ್ಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಡಿಎಫ್ ಹೇಳಿದೆ.
ಈಜಿಪ್ಟ್ ನಗರದಲ್ಲಿ ಕ್ಷಿಪಣಿ ಪತನ: ಇಸ್ರೇಲ್-ಹಮಾಸ್ ನಡುವಿನ ಯುದ್ಧದ ವೇಳೆ ಅನಿರೀಕ್ಷಿತ ಘಟನೆ ನಡೆದಿದೆ. ಇಸ್ರೇಲ್ ಗಡಿಯಲ್ಲಿರುವ ಈಜಿಪ್ಟ್ ಪಟ್ಟಣದಲ್ಲಿ ಕ್ಷಿಪಣಿ ಪತನಗೊಂಡಿದೆ. ಗಡಿಯಲ್ಲಿರುವ ರೆಡ್ ಸೀ ರೆಸಾರ್ಟ್ ಪಟ್ಟಣದಲ್ಲಿರುವ ವೈದ್ಯಕೀಯ ಕೇಂದ್ರಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಮಾಧ್ಯಮಗಳು ವರದಿ ಮಾಡಿವೆ.