ಪ್ಯಾರಿಸ್ : ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ದೆಹಲಿ ವಿಮಾನ ನಿಲ್ದಾಣದಿಂದ ಫ್ರಾನ್ಸ್‌ಗೆ ತೆರಳಿದ್ದರು. ಇಂದು ಬೆಳಗ್ಗೆ ಪ್ಯಾರಿಸ್ ಪ್ರವಾಸ ಮುಗಿಸಿ ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಈ ಬೆನ್ನಲ್ಲೇ ಫ್ರಾನ್ಸ್ ಭೇಟಿಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ತಮ್ಮ ಪ್ರವಾಸ ಸ್ಮರಣೀಯ ಎಂದು ಬಣ್ಣಿಸಿದ್ದಾರೆ. ಜೊತೆಗೆ, ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ತುಕಡಿಗೆ ಸ್ಥಾನ ಸಿಕ್ಕಿರುವುದು ಅದ್ಭುತ ಎಂದು ವರ್ಣಿಸಿದ್ದಾರೆ.
"ಈ ಬಾರಿಯ ಫ್ರಾನ್ಸ್ ಭೇಟಿಯು ಸ್ಮರಣೀಯವಾಗಿತ್ತು. ಅದರಲ್ಲೂ ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ವಿಶೇಷ. ಪರೇಡ್‌ನಲ್ಲಿ ಭಾರತೀಯ ತುಕಡಿ ಭಾಗಿಯಾಗಿ ಹೆಮ್ಮೆ ಪಡುವುದನ್ನು ನೋಡಿ ಸಂತಸವಾಯಿತು. ಈ ಪ್ರೀತಿಯ ಆತಿಥ್ಯಕ್ಕಾಗಿ ನಾನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಫ್ರೆಂಚ್ ಜನರಿಗೆ ಕೃತಜ್ಞನಾಗಿದ್ದೇನೆ. ಭಾರತ-ಫ್ರಾನ್ಸ್ ಸ್ನೇಹವು ಹೀಗೆ ಮುಂದುವರೆಯಲಿ" ಎಂದು ಪರೇಡ್ನ ಛಾಯಾಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ :ರಕ್ಷಣಾ ಸಹಕಾರವೇ ಭಾರತ - ಫ್ರಾನ್ಸ್ ಬಾಂಧವ್ಯದ ಆಧಾರಸ್ತಂಭ: ಪ್ರಧಾನಿ ಮೋದಿ
ನಿನ್ನೆ ಭಾರತ - ಫ್ರಾನ್ಸ್ ಸ್ಟ್ರಾಟೆಜಿಕ್ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಮಿಲಿಟರಿ ಬ್ಯಾಂಡ್ ನೇತೃತ್ವದ 241 ಸದಸ್ಯ ತ್ರಿಸೇವಾ ಭಾರತೀಯ ಸಶಸ್ತ್ರ ಪಡೆಗಳು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದವು. ಭಾರತೀಯ ವಾಯುಪಡೆಯ (ಐಎಎಫ್) ರಫೇಲ್ ಫೈಟರ್ ಜೆಟ್‌ಗಳು ಫ್ರೆಂಚ್ ಜೆಟ್‌ಗಳೊಂದಿಗೆ ತಾಲೀಮು ನಡೆಸಿದವು. ಪ್ಯಾರಿಸ್‌ನಲ್ಲಿ ನಡೆದ ಈ ಪರೇಡ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಮುಖ ಗಣ್ಯರನ್ನು ಭೇಟಿಯಾದರು.