ಎಡಿನ್‌ಬರ್ಗ್ (ಸ್ಕಾಟ್ಲೆಂಡ್): ಕಾನೂನು ಬದ್ಧವಾಗಿಯೇ ಲಿಂಗ ಬದಲಾವಣೆಗೆ ಅನುಮತಿಸುವ ವಿಧೇಯಕಕ್ಕೆ ಸ್ಕಾಟ್ಲೆಂಡ್ ಸಂಸತ್ ಅನುಮೋದನೆ ನೀಡಿದೆ. ಈ ಸಂಬಂದ ಸದನದಲ್ಲಿ ಪರ ವಿರೋಧದ ಚರ್ಚೆ ನಡೆಯಿತು. ಆಡಳಿತಾರೂಢ ಸ್ಕಾಟಿಷ್ ನ್ಯಾಶನಲ್ ಪಾರ್ಟಿಯಲ್ಲೇ ಈ ಬಗ್ಗೆ ಭಿನ್ನಾಭಿಪ್ರಾಯ ಕೇಳಿ ಬಂದಿತ್ತು. ಹೈವೋಲ್ಟೇಜ್ ಚರ್ಚೆ - ವಾಗ್ವಾದದ ಮಧ್ಯೆಯೂ ಸ್ಕಾಟ್ಲೆಂಡ್‌ನ ಶಾಸಕರು ವಿವಾದಾತ್ಮಕ ಕಾನೂನನ್ನು ಅಂಗೀಕರಿಸಿದ್ದಾರೆ. ಈ ಮೂಲಕ ತೃತೀಯ ಲಿಂಗಿಗಳು ಕಾನೂನುಬದ್ದವಾಗಿ ಲಿಂಗ ಬದಲಾವಣೆಗೆ ಅನುಕೂಲವಾಗಲಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಈಗ ಮಸೂದೆ ಅಂಗೀಕಾರಗೊಂಡಿದ್ದು, ಇದು ಅಲ್ಲಿನ ರಾಜನ ಅನುಮತಿಯನ್ನು ಪಡೆಯಬೇಕಿದೆ. ರಾಜನ ಅನುಮತಿ ಬಳಿಕ ಹೊಸ ಕಾನೂನು ಜಾರಿಗೆ ಬರಲಿದೆ. ಇನ್ನು ಹೊಸ ಕಾನೂನಿನ ಪ್ರಕಾರ ಲಿಂಗ ಗುರುತಿಸುವಿಕೆ ಪ್ರಮಾಣಪತ್ರ ಬಯಸುವರಿಗೆ ಕನಿಷ್ಠ ವಯಸ್ಸನ್ನು 16ಕ್ಕೆ ಇಳಿಸಲು ಅನುಮತಿಸುತ್ತದೆ. ಅರ್ಜಿದಾರರು ಒಮ್ಮೆ ಲಿಂಗ ಬದಲಾವಣೆ ಮಾಡಿಕೊಂಡ ಬಳಿಕ ಎರಡು ವರ್ಷ ಮತ್ತೆ ಲಿಂಗ ಬದಲಾವಣೆಗೆ ಅವಕಾಶವಿಲ್ಲ. ಈ ಮೊದಲು ಇದ್ದ 3 ವರ್ಷಗಳ ಅವಧಿಯಲ್ಲಿ ಹೊಸ ವಿಧೇಯಕದಲ್ಲಿ ಎರಡು ವರ್ಷಗಳಿಗೆ ಇಳಿಕೆ ಮಾಡಲಾಗಿದೆ.