ಬೆಲ್‌ಗ್ರೇಡ್ (ಸರ್ಬಿಯಾ):ಸರ್ಬಿಯಾದಲ್ಲಿ ಕಳೆದ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ನಗರವು ಸರ್ಬಿಯಾದ ರಾಜಧಾನಿ ಬೆಲ್‌ಗ್ರೇಡ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ. ಸರ್ಕಾರಿ ಸ್ವಾಮ್ಯದ RTS ದೂರದರ್ಶನ ವರದಿಯಂತೆ, ಮ್ಲಾಡೆನೋವಾಕ್ ನಗರದಲ್ಲಿ ದಾಳಿ ನಡೆದಿದೆ. ದಾಳಿಕೋರ ಚಲಿಸುತ್ತಿದ್ದ ವಾಹನದಿಂದ ಸ್ವಯಂಚಾಲಿತ ಆಯುಧವನ್ನು ತೆಗೆದುಕೊಂಡು ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಸರ್ಬಿಯಾದಲ್ಲಿ ಬಂದೂಕುಗಳಿಗೆ ಸಂಬಂಧಿಸಿದ ನಿಯಮಗಳು ತುಂಬಾ ಕಠಿಣವಾಗಿವೆ. ಹೀಗಿದ್ದರೂ ನಿರಂತರವಾಗಿ ಘಟನೆಗಳು ಮರುಕಳಿಸುತ್ತಿವೆ. ಈ ಘಟನೆಯ ಮುನ್ನಾದಿನ ಶಾಲೆಯೊಂದರಲ್ಲಿ ಭೀಕರ ಗುಂಡಿನ ದಾಳಿ ನಡೆದಿತ್ತು.
ಬಾಲಕನಿಂದ ಗುಂಡಿನ ದಾಳಿ, 9 ಸಾವು: ಬೆಲ್‌ಗ್ರೇಡ್‌ನ ಶಾಲೆಯೊಂದರಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಎಂಟು ಮಕ್ಕಳು ಸೇರಿದಂತೆ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಸರ್ಬಿಯಾ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಬೆಲ್‌ಗ್ರೇಡ್‌ನಲ್ಲಿರುವ ವ್ಲಾಡಿಸ್ಲಾವ್ ರಿಬ್ನಿಕರ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ 8:40 ಗಂಟೆಗೆ ದಾಳಿಯ ಕುರಿತು ಪೊಲೀಸರಿಗೆ ಪ್ರಥಮ ಮಾಹಿತಿ ದೊರೆತಿದೆ. ಪೊಲೀಸರು ಸ್ಥಳ ತಲುಪಿದಾಗ ವಿದ್ಯಾರ್ಥಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಆರೋಪಿಯು ಶಾಲಾ ಸಿಬ್ಬಂದಿ ಮತ್ತು ಇತರ ವಿದ್ಯಾರ್ಥಿಗಳ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾನೆ. ಎಂಟು ಮಕ್ಕಳು ಮತ್ತು ಭದ್ರತಾ ಸಿಬ್ಬಂದಿಯನ್ನು ಆತ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ ಆರು ಮಕ್ಕಳು ಮತ್ತು ಶಿಕ್ಷಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.