ಟೋಕಿಯೊ (ಜಪಾನ್): ಹೆಚ್ಚೆಚ್ಚು ಸಾರಾಯಿ ಸೇವಿಸುವಂತೆ ಜಪಾನ್ ಸರ್ಕಾರ ತನ್ನ ಯುವಕರನ್ನು ಪ್ರಚೋದಿಸುತ್ತಿದೆ. ಅಲ್ಕೊಹಾಲ್ನಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗುತ್ತಿರುವ ಕಾರಣದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಜನಸಂಖ್ಯಾ ನಿಬಿಡತೆಯಲ್ಲಿನ ಬದಲಾವಣೆ, ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಕೊರೊನಾವೈರಸ್ನಿಂದ ಉಂಟಾದ ಜೀವನ ಶೈಲಿಯ ಬದಲಾವಣೆಗಳಿಂದ ಅಲ್ಕೊಹಾಲ್ನಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಈ ಆದಾಯದ ಹೆಚ್ಚಳಕ್ಕಾಗಿ ಸರ್ಕಾರವೇ ಖುದ್ದಾಗಿ ಹೆಚ್ಚೆಚ್ಚು ಮದ್ಯ ಸೇವಿಸುವುದನ್ನು ಪ್ರಚೋದಿಸುವ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ.
ರಾಷ್ಟ್ರದ ತೆರಿಗೆ ಇಲಾಖೆಯು ಸೇಕ್ ವಿವಾ! (Sake Viva!) ಹೆಸರಿನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದು, ಇದು ಸೆಪ್ಟೆಂಬರ್ 9ರವರೆಗೆ ನಡೆಯಲಿದೆ. ಯುವಜನರು ಹೆಚ್ಚು ಮದ್ಯ ಸೇವಿಸಲು ಏನು ಮಾಡಬೇಕೆಂಬ ಬಗ್ಗೆ ಹೊಸ ಉತ್ಪನ್ನ ಮತ್ತು ವಿನ್ಯಾಸಗಳ ಬಗ್ಗೆ ಐಡಿಯಾಗಳನ್ನು ನೀಡುವಂತೆ 20 ರಿಂದ 39ರ ವಯೋಮಾನದ ಜನರಿಗೆ ಈ ಅಭಿಯಾನದ ಮೂಲಕ ಸ್ಪರ್ಧೆ ಏರ್ಪಡಿಸಲಾಗಿದೆ. ಜಪಾನ್ನ ಅಲ್ಕೊಹಾಲಿಕ್ ಪಾನೀಯಗಳಾದ ಸೇಕ್ (ಅಕ್ಕಿ ವೈನ್), ಬಿಯರ್, ವಿಸ್ಕಿ ಮತ್ತು ವೈನ್ಗಳ ಸೇವನೆಯನ್ನು ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.