ಇಸ್ಲಾಮಾಬಾದ್ : ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯೊಂದಿಗೆ ಉಂಟಾದ ಗೊಂದಲದ ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕವಾಗುವ ರೀತಿಯಲ್ಲಿ ಸೌದಿ ಅರೇಬಿಯಾ ತನಗೆ ಹೆಚ್ಚುವರಿ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಯಾವುದೋ ಒಂದು ರೀತಿಯ ಸಹಾಯ ನೀಡುವ ಬಗ್ಗೆ ಸೌದಿ ಅರೇಬಿಯಾ ನಮಗೆ ಮಾಹಿತಿ ನೀಡಿದೆ ಎಂದು ಹಣಕಾಸು ರಾಜ್ಯ ಸಚಿವೆ ಡಾ ಆಯಿಶಾ ಪಾಶಾ ಅವರು ಸಂಸದೀಯ ಸಮಿತಿಯ ಸಭೆಯಲ್ಲಿ ಭಾಗವಹಿಸಿದ ನಂತರ ಹೇಳಿದರು. ಆದರೆ ಸೌದಿ ಅರೇಬಿಯಾ ನೀಡಬಹುದಾದ ಸಾಲದ ಮೊತ್ತವನ್ನು ಅವರು ಬಹಿರಂಗಪಡಿಸಲಿಲ್ಲ.
ಮಿತ್ರ ದೇಶವೊಂದು ನಮ್ಮ ಪರವಾಗಿ ಹಣಕಾಸು ಠೇವಣಿ ಇಡುವ ನಿಟ್ಟಿನಲ್ಲಿ ಒಂದಿಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹಣಕಾಸು ಸೆನೆಟ್ ಸ್ಥಾಯಿ ಸಮಿತಿಗೆ ತಿಳಿಸಿದರು. ನಾವು ಶೀಘ್ರದಲ್ಲೇ IMF ನೊಂದಿಗೆ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಸಹಿ ಹಾಕುವ ಹಂತವನ್ನು ತಲುಪಲಿದ್ದೇವೆ ಎಂದು ಹೇಳಿದರು. 6 ಶತಕೋಟಿ ಡಾಲರ್‌ಗಳಷ್ಟು ಹೆಚ್ಚುವರಿ ಸಾಲಗಳನ್ನು ವ್ಯವಸ್ಥೆಗೊಳಿಸುವಂತೆ ಐಎಂಎಫ್ ಪಾಕಿಸ್ತಾನಕ್ಕೆ ಸೂಚಿಸಿದೆ ಮತ್ತು ತನ್ನೊಂದಿಗೆ ಮುಂದಿನ ಸಭೆಗೂ ಮುನ್ನ ಈ ಸಾಲದ ಅರ್ಧದಷ್ಟು ಮೊತ್ತ ಬಂದಿರಬೇಕು ಎಂದು ಐಎಂಎಫ್ ಷರತ್ತು ವಿಧಿಸಿದೆ.
ದೇಶವು ಡಿಫಾಲ್ಟರ್ ಆಗುವುದನ್ನು ತಪ್ಪಿಸಲು ಮತ್ತು 1.7 ತಿಂಗಳಿನ ಆಮದುಗಳಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ಮೀಸಲುಗಳನ್ನು ಹೆಚ್ಚಿಸಲು ಹೊಸ ನಿಧಿಗಳ ಅಗತ್ಯವಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಹೆಚ್ಚುವರಿ ಹಣಕಾಸು ಅಗತ್ಯತೆಗಳನ್ನು ಪೂರೈಸಲು ಸೌದಿ ಅರೇಬಿಯಾದಿಂದ 2 ಬಿಲಿಯನ್ ಡಾಲರ್ ಮತ್ತು ಯುಎಇಯಿಂದ 1 ಬಿಲಿಯನ್ ಡಾಲರ್ ಹೆಚ್ಚುವರಿ ಸಾಲವನ್ನು ಪಡೆಯುವುದಾಗಿ ಪಾಕಿಸ್ತಾನವು ಐಎಂಎಫ್‌ಗೆ ತಿಳಿಸಿತ್ತು.