ರಿಯಾದ್(ಸೌದಿ ಅರೇಬಿಯಾ): ಈ ಬಾರಿ ವಿಶ್ವದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ವರ್ಷದ ಹಜ್ ಯಾತ್ರಿಕರ ಸಂಖ್ಯೆಯಲ್ಲಿ ಯಾವುದೇ ಮಿತಿಯಿಲ್ಲ ಎಂದು ಸೌದಿ ಅರೇಬಿಯಾ ಸೋಮವಾರ ಘೋಷಿಸಿದೆ ಎಂದು ದೇಶದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಅಲ್-ರಬಿಯಾ ಅವರನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಜ್ ಎಕ್ಸ್‌ಪೋ-2023ರಲ್ಲಿ ಮಾತನಾಡಿದ ತೌಫಿಕ್ ಅಲ್-ರಬಿಯಾ ಅವರು, ಈ ವರ್ಷದ ಹಜ್‌ನಲ್ಲಿ ಭಾಗವಹಿಸುವ ಯಾತ್ರಿಗಳ ಸಂಖ್ಯೆಯು ಕೋವಿಡ್ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಮರಳುತ್ತದೆ ಮತ್ತು ಈ ವರ್ಷ ಹಜ್ ಯಾತ್ರಾರ್ಥಿಗಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ ಎಂದು ಹೇಳಿದರು.
ಕೋವಿಡ್ ಸೋಂಕಿನಿಂದ ಹೇರಿದ್ದ ಮಿತಿ.. ಈ ಹಿಂದೆ ಕೆಲ ವರ್ಷಗಳ ಕಾಲ ಕೋವಿಡ್ ಕಾರಣದಿಂದ ಹಜ್ ಯಾತ್ರೆಗೆ ಜನರ ಸಂಖ್ಯೆಗೆ ಮಿತಿ ಹೇರಲಾಗಿತ್ತು. 2019ರಲ್ಲಿ ಸುಮಾರು 2.5 ಮಿಲಿಯನ್ ಜನರು ತೀರ್ಥಯಾತ್ರೆಯಲ್ಲಿ ಭಾಗವಹಿಸಿದ್ದರು ಎಂದು ಅರಬ್ ನ್ಯೂಸ್ ವರದಿ ಮಾಡಿದೆ. ಕೋವಿಡ್ ಬಳಿಕ ಎರಡು ವರ್ಷಗಳವರೆಗೆ ಯಾತ್ರಿಕರ ಸಂಖ್ಯೆ ಕಡಿಮೆಯಾಗಿತ್ತು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಟ್ವೀಟ್ ಮಾಡಿದೆ.
ವಯಸ್ಸಿನ ನಿರ್ಬಂಧ: ಅರಬ್ ನ್ಯೂಸ್ ವರದಿಯ ಪ್ರಕಾರ, ಈ ವರ್ಷ ಹಜ್ ಯಾತ್ರೆಗೆ ತೆರಳಲು ಬಯಸುವ ದೇಶದಲ್ಲಿ ವಾಸಿಸುವ ಜನರು ತೀರ್ಥ ಯಾತ್ರೆಗೆ ಅರ್ಜಿ ಸಲ್ಲಿಸಬಹುದು ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯ ಮೊದಲು ಜನವರಿ 5 ರಂದು ಘೋಷಿಸಿತ್ತು. ಸ್ಥಳೀಯ ನಿವಾಸಿಗಳಿಗೆ ನಾಲ್ಕು ವರ್ಗದ ಹಜ್ ಪ್ಯಾಕೇಜ್‌ಗಳು ಲಭ್ಯವಿರುತ್ತವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.