ರಿಯಾದ್ (ಸೌದಿ ಅರೇಬಿಯಾ) :ಸೌದಿ ಅರೇಬಿಯಾ ಮತ್ತೊಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದೆ. ರಿಯಾದ್ ಏರ್ ಎಂದು ನಾಮಕರಣ ಮಾಡಲಾಗಿರುವ ಹೊಸ ವಿಮಾನಯಾನ ಕಂಪನಿಯ ಸ್ಥಾಪನೆಯನ್ನು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಭಾನುವಾರ ಘೋಷಿಸಿದರು. ಹೊಸ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಏಷ್ಯಾ, ಆಫ್ರಿಕಾ ಮತ್ತು ಯುರೋಪ್ ಹೀಗೆ ಮೂರು ಖಂಡಗಳ ಮಧ್ಯದಲ್ಲಿರುವ ರಾಷ್ಟ್ರದ ಭೌಗೋಳಿಕ ಸ್ಥಾನವನ್ನು ಉಪಯೋಗಪಡಿಸಿಕೊಳ್ಳಲು ಸೌದಿ ಅರೇಬಿಯಾ ಮುಂದಾಗಿದೆ. ಇದರಿಂದ ರಿಯಾದ್ ಏರ್ ವಿಶ್ವಕ್ಕೆ ಗೇಟ್‌ವೇ ಆಗಲಿದೆ ಮತ್ತು ಸಾರಿಗೆ, ವ್ಯಾಪಾರ ಮತ್ತು ಪ್ರವಾಸೋದ್ಯಮಗಳ ಜಾಗತಿಕ ತಾಣವಾಗಲಿದೆ.
ರಿಯಾದ್ ಏರ್ 2030 ರ ವೇಳೆಗೆ ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ಸ್ಥಳಗಳಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ರಿಯಾದ್ ಏರ್ ಪಿಐಎಫ್ ಗವರ್ನರ್ ಯಾಸಿರ್ ಅಲ್-ರುಮಯ್ಯನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಾಯುಯಾನ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿ 40 ವರ್ಷಗಳ ಅನುಭವವನ್ನು ಹೊಂದಿರುವ ಟೋನಿ ಡೌಗ್ಲಾಸ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ. ಏರ್‌ಲೈನ್‌ನ ಹಿರಿಯ ನಿರ್ವಾಹಕ ಸ್ಥಾನಗಳಲ್ಲಿ ಸೌದಿ ಮತ್ತು ಅಂತರರಾಷ್ಟ್ರೀಯ ಪರಿಣಿತರು ಕೆಲಸ ಮಾಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ರಿಯಾದ್ ಅನ್ನು ಕೇಂದ್ರವಾಗಿಟ್ಟುಕೊಂಡು ಕೆಲಸ ಮಾಡಲಿರುವ ವಿಮಾನಯಾನ ಸಂಸ್ಥೆಯು ಜಾಗತಿಕವಾಗಿ ಪ್ರಯಾಣ ಮತ್ತು ವಾಯುಯಾನ ಉದ್ಯಮದಲ್ಲಿ ಹೊಸ ಯುಗವನ್ನು ಪ್ರಾರಂಭಿಸಲಿದೆ ಎಂದು ಕಂಪನಿ ಹೇಳಿದೆ.
ರಿಯಾದ್ ಏರ್ ವಿಶ್ವದರ್ಜೆಯ ವಿಮಾನ ಯಾನ ಸಂಸ್ಥೆಯಾಗಲಿದೆ. ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸುಸಜ್ಜಿತ ವಿಮಾನಗಳ ಸುಧಾರಿತ ಫ್ಲೀಟ್ ಮೂಲಕ ಜಾಗತಿಕ ಮಟ್ಟದ ಅತ್ಯುತ್ತಮ ಸುಸ್ಥಿರತೆ ಮತ್ತು ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳಲಿದೆ ಎಂದು ಅದು ಹೇಳಿದೆ. ರಿಯಾದ್ ಏರ್ ವಿಮಾನಯಾನ ಸಂಸ್ಥೆಯು ಸೌದಿ ಅರೇಬಿಯಾ ದೇಶದ ತೈಲ ಹೊರತಾದ ಜಿಡಿಪಿ ಬೆಳವಣಿಗೆಗೆ 20 ಶತಕೋಟಿ ಯುಎಸ್ ಡಾಲರ್ ಕೊಡುಗೆ ನೀಡುವ ನಿರೀಕ್ಷೆಯಿದೆ ಮತ್ತು 2,00,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇದೆ. ವಿಮಾನಯಾನ ಸಂಸ್ಥೆಯು ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತು ನಿಧಿಯಾಗಿರುವ 'ಸಾರ್ವಜನಿಕ ಹೂಡಿಕೆ ನಿಧಿ' (Public Investment Fund's -PIF) ಯ ಸಂಪೂರ್ಣ ಸ್ವಾಮ್ಯದ ಕಂಪನಿಯಾಗಿದೆ.
ಸಂಪೂರ್ಣ ಪಿಐಎಫ್ ಸ್ವಾಮ್ಯದ ಅಂಗಸಂಸ್ಥೆಯಾಗಿ ಹೊಸ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಪಿಐಎಫ್‌ನ ಹೂಡಿಕೆ ಪರಿಣತಿ ಮತ್ತು ಹಣಕಾಸಿನ ಸಾಮರ್ಥ್ಯಗಳಿಂದ ಪ್ರಯೋಜನ ಪಡೆಯಲಿದೆ ಮತ್ತು ಪ್ರಮುಖ ರಾಷ್ಟ್ರೀಯ ವಿಮಾನಯಾನ ಕಂಪನಿಯಾಗುವತ್ತ ಕಾರ್ಯಾಚರಣೆಗಳನ್ನು ವಿಸ್ತರಿಸಲಿದೆ. ಇತ್ತೀಚೆಗೆ ಘೋಷಿಸಲಾದ ಕಿಂಗ್ ಸಲ್ಮಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಸ್ಟರ್‌ಪ್ಲಾನ್ ಸೇರಿದಂತೆ ಈ ವಲಯದಲ್ಲಿ ಪಿಐಎಫ್‌ನ ಇತ್ತೀಚಿನ ಹೂಡಿಕೆಯನ್ನು ಇದು ಪ್ರತಿನಿಧಿಸುತ್ತದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ರಿಯಾದ್ ಏರ್ ಕಂಪನಿಯ ಸ್ಥಾಪನೆಯು ಸ್ಥಳೀಯ ಆರ್ಥಿಕತೆಯ ವೈವಿಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುವ ವಲಯಗಳ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ತನ್ನ ಕಾರ್ಯತಂತ್ರದ ಭಾಗವಾಗಿದೆ ಎಂದು ಪಿಐಎಫ್ ಹೇಳಿದೆ.
ಇದನ್ನೂ ಓದಿ : ಚೀನಾ ಸಾಲದ ಶೂಲದಿಂದ ನಲುಗಿದ ರಾಷ್ಟ್ರಗಳು: ದಾರಿ ಕಾಣದೆ ಕಂಗಾಲು!