ಮಾಸ್ಕೋ (ರಷ್ಯಾ):ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುತ್ತಿಲ್ಲ. ಈ ಕುರಿತು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಇಂದು (ಶುಕ್ರವಾರ) ಅಧಿಕೃತ ಘೋಷಣೆ ಮಾಡಿದ್ದಾರೆ. ''ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಸದ್ಯ ವಿಶೇಷ ಮಿಲಿಟರಿ ಕಾರ್ಯಾಚರಣೆಗಳಿಗೆ ಒತ್ತು ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲೂ ಪುಟಿನ್ ಭಾಗವಹಿಸಿರಲಿಲ್ಲ. ಶೃಂಗದಲ್ಲಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಪಾಲ್ಗೊಂಡಿದ್ದರು. ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡಿಪಾರು ಮಾಡುವ ಆಪಾದಿತ ಯೋಜನೆಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಪುಟಿನ್ ಅವರಿಗೆ ಬಂಧನ ವಾರಂಟ್ ಹೊರಡಿಸಿತ್ತು. ದಕ್ಷಿಣ ಆಫ್ರಿಕಾ ಐಸಿಸಿಗೆ ಸಹಿ ಹಾಕಿದ್ದು, ಪುಟಿನ್ ದೇಶದಲ್ಲಿದ್ದರೆ ಬಂಧನಕ್ಕೆ ಸಹಾಯ ಮಾಡುವ ಕಾರಣದಿಂದ ದೂರ ಉಳಿದಿದ್ದರು.
ಇದನ್ನೂ ಓದಿ:ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್
ಶೃಂಗಸಭೆಗೆ ಭರದ ಸಿದ್ಧತೆ: 2022ರ ಡಿಸೆಂಬರ್ 1ರಂದು ಇಂಡೋನೇಷ್ಯಾ ನಂತರ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಭಾರತದ ಅಧ್ಯಕ್ಷತೆಯಲ್ಲಿ ಜಿ20 ವಿಶ್ವ ನಾಯಕರ ಶೃಂಗಸಭೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.