ಲಂಡನ್: ಭಾಗಶಃ ರಷ್ಯಾ ಸೇನೆ ಯುದ್ಧಕ್ಕೆ ಸಜ್ಜುಗೊಳಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ್ದಾರೆ. ಭಾಗಶಃ ರಷ್ಯಾ ಸೇನೆ ಯುದ್ಧಕ್ಕೆ ಸಜ್ಜಾಗುತ್ತಿರುವುದು ಎರಡನೇ ಮಹಾಯುದ್ಧದ ನಂತರ ಇದೇ ಪ್ರಥಮ ಬಾರಿಯಾಗಿದೆ. ಸೇನೆಯನ್ನು ಸಜ್ಜುಗೊಳಿಸಿ ಉಕ್ರೇನ್ನ ಬಹುದೊಡ್ಡ ಭೂಭಾಗವನ್ನು ವಶಪಡಿಸಿಕೊಳ್ಳುವ ಯೋಜನೆ ಹಾಕಿರುವ ಪುಟಿನ್, ತಾವು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡಿದಾಗ ಅದು ಕೇವಲ ಟೊಳ್ಳು ಬೆದರಿಕೆಯಲ್ಲ ಎಂಬ ಸಂದೇಶವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರವಾನಿಸಿದ್ದಾರೆ.
ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ನಂತರ ಈಗ ಪುಟಿನ್ ಪರಮಾಣು ಸಂಘರ್ಷದ ಭೀತಿಯನ್ನು ಹೆಚ್ಚಿಸಿದ್ದಾರೆ. ಹಂಗೆರಿ ದೇಶದ ಗಾತ್ರದಷ್ಟು ಉಕ್ರೇನ್ ಪ್ರದೇಶ ಸ್ವಾಧೀನಪಡಿಸಿಕೊಳ್ಳುವ ಯೋಜನೆಯ ಭಾಗವಾಗಿ ಅವರು 3 ಲಕ್ಷದಷ್ಟು ಕಾಯ್ದಿಟ್ಟ ಸೇನಾಪಡೆಯನ್ನು ಯುದ್ಧಕ್ಕೆ ಕರೆಸಿಕೊಳ್ಳುತ್ತಿದ್ದಾರೆ.
ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆ ಎದುರಾದರೆ ನಮ್ಮ ಜನರನ್ನು ರಕ್ಷಿಸಲು ನಾವು ಲಭ್ಯ ಇರುವ ಎಲ್ಲ ವಿಧಾನಗಳನ್ನು ಬಳಸುತ್ತೇವೆ, ಇದು ಟೊಳ್ಳು ಬೆದರಿಕೆಯಲ್ಲ ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನ ಭಾಷಣದಲ್ಲಿ ಹೇಳಿದರು.