ಮಾಸ್ಕೋ:ಭಾರತದ ಆತಿಥ್ಯದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗಿಯಾಗುವ ಸಾಧ್ಯತೆ ಇದೆ ಎಂದು ರಷ್ಯಾದ G20 ಶೆರ್ಪಾ ಸ್ವೆಟ್ಲಾನಾ ಲುಕಾಶ್ ತಿಳಿಸಿದ್ದಾರೆ.
ರಷ್ಯಾ ಅಧ್ಯಕ್ಷರು ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುತ್ತಾರೆ ಎಂದು ಭಾವಿಸುತ್ತೇನೆ. ಆದರೆ, ಇದು ಅವರ ನಿರ್ಧಾರಕ್ಕೆ ಬಿಟ್ಟಿದ್ದು. ಜಿ20 ಶೃಂಗಸಭೆಗೆ ಇನ್ನು ಒಂದು ವರ್ಷ ಅವಧಿ ಇದೆ. ಈ ಬಗ್ಗೆ ಈಗಲೇ ಉತ್ತರಿಸಲು ಸಾಧ್ಯವಿಲ್ಲ. ಅವರು ಶೃಂಗಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಿರುವಂತೆ ಕಾಣುತ್ತಿದೆ ಎಂದು ಅವರು ರಷ್ಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಇಂಡೋನೇಷ್ಯಾ ಸಾರಥ್ಯದಲ್ಲಿ ಮುಗಿದ ಜಿ20 ಶೃಂಗಸಭೆಗೆ ಪುಟಿನ್ ಗೈರಾಗಿದ್ದರು. 2023ರ ಸೆಪ್ಟೆಂಬರ್ 9-10ರಂದು ಜಿ 20 ಶೃಂಗಸಭೆಯ ಆತಿಥ್ಯವನ್ನು ಭಾರತ ಸ್ವೀಕರಿಸಿದೆ. ಈ ಹಿನ್ನೆಲೆ ಭಾರತ ಶೃಂಗಸಭೆ ಸಮಯದಲ್ಲಿ ದೇಶಾದ್ಯಂತ 200ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಲಿದೆ.
ನಮ್ಮ ದೇಶದ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇರುವ ಯಾವುದೇ ಒಂದು ಕಾರ್ಯಕ್ರಮವನ್ನು ನಾವು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದು ಸಭೆ, ಕಾನ್ಫರೆನ್ಸ್ ಅಥವಾ ಸೆಮಿನಾರ್ ಕೂಡ ಆಗಿರಬಹುದು. ರಷ್ಯಾದ ಸ್ಥಾನ, ದೃಷ್ಟಿಯನ್ನು ಪ್ರಸ್ತುತ ಪಡಿಸಲು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಮಹತ್ವ ಪಡೆದಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಭಾರತದ ಸಾರಥ್ಯದಲ್ಲಿ ಜಿ20 ಶೆರ್ಪಾ ಸಭೆ ಡಿ. 5ರಂದು ಉದಯಪುರದಲ್ಲಿ ಆರಂಭವಾಗಿದ್ದು, ಈ ವೇಳೆ ಮಾತನಾಡಿದ ಅವರು, ಡಿಜಿಟಲ್ ರೂಪಾಂತರ ಮತ್ತು ಅವಿಷ್ಕಾರಗಳು ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರಮುಖವಾಗಿದೆ. ಈ ಹಿನ್ನೆಲೆ G20 ವರ್ಕಿಂಗ್ ಟ್ರ್ಯಾಕ್‌ಗಳಲ್ಲಿ ಕ್ರಾಸ್-ಕಟಿಂಗ್ ವಿಷಯಗಳಾಗಿ ಪ್ರಸ್ತಾಪಿಸಲಾಗಿದೆ. ಮಹಿಳಾ ನೇತೃತ್ವದ ಅಭಿವೃದ್ಧಿ ಕೂಡ ಗುಂಪಿನ ಪ್ರಮುಖ ಪ್ರಾಧಾನ್ಯತೆಯಾಗಿದೆ ಎಂದು ತಿಳಿಸಿದರು.
ಸಭೆ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಉನ್ನತ ವೃತ್ತಿಪರ ಮತ್ತು ತಜ್ಞರ ಜೊತೆ ಸಭೆ ಪ್ರೇರಣಾದಾಯಕವಾಗಿತ್ತು. ಜಿ20ಸೃಜನಶೀಲ ಮನಸ್ಸುಗಳೊಂದಿಗೆ ಯಶಸ್ವಿಯಾಗಲು ಉದ್ದೇಶಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಹಿಂದಿ ಇತರ ಏಷ್ಯನ್ ಭಾಷೆಗಳಿಗೆ ಅಮೆರಿಕ ಅಧ್ಯಕ್ಷರ ಭಾಷಣ ಭಾಷಾಂತರ : ಶ್ವೇತಭವನ