ತೈಪೆ (ಚೀನಾ) :ಜಿ20 ಶೃಂಗಸಭೆ ಸೇರಿದಂತೆ ಹಲವು ಮಹತ್ವದ ಜಾಗತಿಕ ವೇದಿಕೆಗಳಿಂದ ದೂರವಾಗಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬುಧವಾರ ಬೀಜಿಂಗ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಪರಸ್ಪರ ಸಹಕಾರ ಮುಂದುವರಿಕೆಗೆ ಇದೇ ವೇಳೆ ಎರಡೂ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಜೊತೆಗೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಕೆ, ತೈವಾನ್ ವಶಕ್ಕೆ ಚೀನಾ ತಹತಹಿಸುತ್ತಿರುವ ನಡುವೆಯೇ, ಉಭಯ ದೇಶಗಳ ನಾಯಕರ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆಹ್ವಾನದ ಮೇರೆಗೆ ಬೆಲ್ಟ್ ಅಂಡ್ ರೋಡ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪುಟಿನ್, ಇಂದು ಪ್ರತ್ಯೇಕವಾಗಿ ದ್ವಿಪಕ್ಷೀಯ ಸಭೆ ನಡೆಸಿದರು. ಉಕ್ರೇನ್ ಯುದ್ಧದ ಮಧ್ಯೆಯು ಚೀನಾ ಪ್ರವಾಸ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವ್ಯಾಪಾರ, ಏಷ್ಯಾ, ಮಧ್ಯಪ್ರಾಚ್ಯ ಮತ್ತು ಇತರೆಡೆ ಹೆದ್ದಾರಿಗಳು, ಬಂದರುಗಳು, ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿದ ಬೆಲ್ಟ್ ಮತ್ತು ರೋಡ್ ಶೃಂಗದ ಬಗ್ಗೆ ಚರ್ಚಿಸಿದರು.
ವಿದೇಶಾಂಗ ನೀತಿ ಮುಂದುವರಿಕೆ:ಉಕ್ರೇನ್ ಮೇಲಿನ ರಷ್ಯಾ ದಾಳಿಯಲ್ಲಿ ತಟಸ್ಥ ನೀತಿಯನ್ನು ಅನುಸರಿಸುವುದಾಗಿ ಚೀನಾ ಘೋಷಿಸಿತ್ತು. ಆದರೆ, ರಹಸ್ಯವಾಗಿ ರಷ್ಯಾಗೆ ಬೆಂಬಲ ನೀಡುತ್ತಿದೆ ಎಂಬುದು ಪಾಶ್ಚಿಮಾತ್ಯ ರಾಷ್ಟ್ರಗಳ ಆಪಾದನೆಯಾಗಿದೆ. ಆದರೆ, ರಷ್ಯಾದ ದಾಳಿಯನ್ನು ಚೀನಾ ಈವರೆಗೂ ಬಹಿರಂಗವಾಗಿ ಟೀಕಿಸಿಲ್ಲ. ಹೀಗಾಗಿ ಉಭಯ ರಾಷ್ಟ್ರಗಳ ನಡುವಿನ ವಿದೇಶಾಂಗ ನೀತಿಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಲು ಸಭೆಯಲ್ಲಿ ಅಂಗೀಕರಿಸಲಾಗಿದೆ.