ಕೀವ್(ಉಕ್ರೇನ್):ಯುದ್ಧ ಸಾರಿ ಕಳೆದೊಂದು ವರ್ಷದಿಂದ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಇರುವ ರಷ್ಯಾ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದೆ. ದಾಳಿಯಲ್ಲಿ ನಾಗರಿಕರ ಪ್ರಾಣಾಹುತಿಯೂ ನಡೆಯುತ್ತಿದೆ. ಪೂರ್ವ ಉಕ್ರೇನ್ ನಗರದ ಸ್ಲೋವಿಯನ್ಸ್ಕ್‌ನ ವಸತಿ ಪ್ರದೇಶದ ಮೇಲೆ ಶುಕ್ರವಾರ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ.
ಡೊನೆಟ್ಸ್ಕ್ ಪ್ರದೇಶದ ಗವರ್ನರ್ ಪಾವ್ಲೋ ಕೈರಿಲೆಂಕೊ ಈ ಬಗ್ಗೆ ಮಾಹಿತಿ ನೀಡಿದ್ದು, ರಷ್ಯಾ ನಾಗರಿಕರ ಮೇಲೂ ದಾಳಿ ನಡೆಸುತ್ತಿದೆ. ತನ್ನ ಎಸ್ -300 ಕ್ಷಿಪಣಿಗಳನ್ನು ಸ್ಲೋವಿಯನ್ಸ್ಕ್, ಬಖ್ಮುಟ್ ನಗರದ ಪಶ್ಚಿಮಕ್ಕೆ ಹಾರಿ ಬಿಟ್ಟಿದೆ. ಇದರಿಂದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಸಮಯದಲ್ಲಿ 21 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಮಾರ್ಗದಲ್ಲಿ ಸಾವನ್ನಪ್ಪಿದ ಎಂದು ತಿಳಿಸಿದ್ದಾರೆ.
ರಷ್ಯಾ ವಿರುದ್ಧ ಉಕ್ರೇನಿಯನ್ ಸೇನೆ ನಡೆಸುತ್ತಿರುವ ಪ್ರತಿದಾಳಿಯಲ್ಲಿ ಈ ಪ್ರದೇಶ ಮುಂಚೂಣಿಯಲ್ಲಿದೆ. ಇಲ್ಲಿ ಅತ್ಯಂತ ತೀವ್ರವಾದ ಹೋರಾಟ ನಡೆಸಲಾಗುತ್ತಿದೆ. ಇದರಿಂದ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಕೈರಿಲೆಂಕೊ ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶುಕ್ರವಾರವಷ್ಟೇ ಸೈನ್ಯಕ್ಕೆ ನಾಗರಿಕರನ್ನು ಸೇರಿಸಿಕೊಳ್ಳಲು ಮತ್ತು ಕರೆದರೆ ಅಗತ್ಯ ದೇಶಸೇವೆಗೆ ಸಜ್ಜಾಗಿರಬೇಕು. ದೇಶದಿಂದ ಪಲಾಯನ ಮಾಡುವುದನ್ನು ತಡೆಯುವ ಮಸೂದೆಗೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ.
ಪುಟಿನ್ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾನೂನಿನಲ್ಲಿ ಯುವಕರು ಅನುಮತಿ ರಹಿತ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಯಾರೇ ಆಗಲಿ ದೇಶದಿಂದ ತೆರಳುವ ಮುನ್ನ ಸಕಾರಣಗಳ ಸಮೇತ ಸರ್ಕಾರಿ ಕಚೇರಿಗೆ ಮಾಹಿತಿ ನೀಡಬೇಕು ಎಂದು ಕಟ್ಟಳೆ ವಿಧಿಸಲಾಗಿದೆ.
ಉಕ್ರೇನ್ ವಿರುದ್ಧ ಸೈನಿಕರನ್ನು ಸಜ್ಜುಗೊಳಿಸಲು ಅಧ್ಯಕ್ಷ ಪುಟಿನ್ ಆದೇಶಿಸಿದ ಬಳಿಕ ಕೆಲ ಯುವಕರು ದೇಶದಿಂದ ಕಾಲ್ಕಿತ್ತಿದ್ದರು. ಇದರಿಂದ ಸರ್ಕಾರ ಕಠಿಣ ನಿರ್ಧಾರಕ್ಕೆ ಬಂದಿದೆ. ಯುವ ಜನಾಂಗ ದೇಶಸೇವೆ ಮಾಡಲು ಕಾನೂನನ್ನೇ ಜಾರಿ ಮಾಡಿದೆ.
2021 ರ ಫೆಬ್ರವರಿ 24 ರಿಂದ ಪ್ರಾರಂಭವಾಗಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ. ಎರಡನೆಯ ಮಹಾಯುದ್ಧದ ನಂತರ ಯುರೋಪ್ನಲ್ಲಿನ ಅತಿದೊಡ್ಡ ಸಂಘರ್ಷ ಇದಾಗಿದೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಉಕ್ರೇನಿಯನ್ ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳು ರಷ್ಯಾ ದಾಳಿಗೆ ಛಿದ್ರವಾಗಿವೆ. ಈ ಸಂಘರ್ಷ ಜಾಗತಿಕ ಆರ್ಥಿಕತೆಗೂ ದೊಡ್ಡ ಹೊಡೆತ ನೀಡಿದೆ.
ಅಂತಾರಾಷ್ಟ್ರೀಯ ಕೋರ್ಟ್ ಬಂಧನ ವಾರಂಟ್:ಉಕ್ರೇನ್ ಮೇಲೆ ಯುದ್ಧ ಸಾರಿ ರಕ್ತಪಾತ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಕಿಡಿಕಾರಿ ಕೆಲ ದಿನಗಳ ಹಿಂದಷ್ಟೇ ಬಂಧನ ವಾರಂಟ್ ಜಾರಿ ಮಾಡಿತ್ತು. ಅದರಂತೆ ಪುಟಿನ್ ಬಂಧಿಸಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ನ್ಯಾಯಾಲಯ ಮನವಿ ಮಾಡಿತ್ತು. ಆದರೆ, ಇದಕ್ಕೆ ರಷ್ಯಾ ತಿರುಗೇಟು ನೀಡಿತ್ತು. ಕೋರ್ಟ್ನ ವ್ಯಾಪ್ತಿಯನ್ನೇ ಪ್ರಶ್ನಿಸಿದ್ದು, ವಾರಂಟ್ ಅರ್ಥಹೀನವಾಗಿದೆ ಎಂದು ಹೇಳಿತ್ತು.
ಉಕ್ರೇನ್ ಮೇಲೆ ವರ್ಷದಿಂದ ಸತತವಾಗಿ ಯುದ್ಧ ಸಾರಿರುವ ರಷ್ಯಾ ಅಲ್ಲಿನ ಮಕ್ಕಳನ್ನು ಅಪಹರಣ ಮಾಡಲಾಗಿದೆ. ರಷ್ಯಾಕ್ಕೆ ಮಕ್ಕಳನ್ನು ಕಾನೂನುಬಾಹಿರವಾಗಿ ವರ್ಗ ಮಾಡಿದ ಪ್ರಕರಣದಲ್ಲಿ ವ್ಲಾಡಿಮಿರ್ ಪುಟಿನ್ ಬಂಧನಕ್ಕಾಗಿ ಅಂತಾರಾಷ್ಟ್ರೀಯ ಕೋರ್ಟ್ ಸೂಚಿಸಿದೆ. ಆದರೆ, ನಮ್ಮಲ್ಲಿ ಯಾವುದೇ ಪೊಲೀಸ್ ಪಡೆ ಇಲ್ಲದ ಕಾರಣ, ಪುಟಿನ್ ಬಂಧನ ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಿಟ್ಟಿದ್ದು ಎಂದು ಅದು ಹೇಳಿದೆ.
ಓದಿ:ರಷ್ಯಾದ ಸದಸ್ಯತ್ವ ಅಮಾನತುಗೊಳಿಸಿದ ಹಣಕಾಸು ಕ್ರಿಯಾ ಕಾರ್ಯಪಡೆ (FATF)