ಕೀವ್( ಉಕ್ರೇನ್):ಉಕ್ರೇನ್ ಮೇಲಿನ ತನ್ನ ದಾಳಿಯನ್ನುರಷ್ಯಾ ತೀವ್ರಗೊಳಿಸಿದೆ. ಮಂಗಳವಾರ ಸಂಜೆ ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ಮೇಲೆ ರಷ್ಯಾ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.
ಡೊನೆಟ್ಸ್ಕ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ ಹೇಳುವ ಪ್ರಕಾರ, ಮಂಗಳವಾರ ಸ್ಥಳೀಯ ಕಾಲಮಾನ 7:30ರ ಸುಮಾರಿಗೆ ರಷ್ಯಾದಿಂದ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. "ನಾವೀಗ ನಗರದಲ್ಲಿ ಗಾಯಗೊಂಡವರು ಮತ್ತು ಪ್ರಾಯಶಃ ಸತ್ತವರ ಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಶ್ರಮಿಸುತ್ತಿದ್ದೇವೆ. ರಷ್ಯಾದ ಈ ದಾಳಿಯಿಂದ ಅಪಾರ ಸಾವು- ನೋವು ಸಂಭವಿಸಿದೆ. ಕ್ರಾಮಾಟೋರ್ಸ್ಕ್ ನಗರ ಪ್ರದೇಶವಾಗಿದ್ದು, ಜನದಟ್ಟಣೆಯಿಂದ ಕೂಡಿದೆ. ಹೀಗಾಗಿ ದೊಡ್ಡ ಮಟ್ಟದ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿದೆ. ರಷ್ಯಾ ನಡೆಸಿದ ಎರಡನೇ ಕ್ಷಿಪಣಿ ದಾಳಿ ನಗರದ ಹೊರವಲಯದಲ್ಲಿರುವ ಹಳ್ಳಿಯೊಂದರ ಮೇಲೆ ನಡೆದಿದೆ ಎಂದು ಸುದ್ದಿಯಾಗಿದೆ.