ಮಾಸ್ಕೋ (ರಷ್ಯಾ):ಉಕ್ರೇನ್‌ನ ಜಪೋರಿಝಿಯಾ ಪ್ರದೇಶದಲ್ಲಿ ಉಕ್ರೇನ್ ಸೇನೆ ನಡೆಸಿದ ಶೆಲ್ ದಾಳಿಗೆ ರಷ್ಯಾದ ಆರ್‌ಐಎ ನೊವೊಸ್ಟಿಯ ಪತ್ರಕರ್ತ ಸಾವನ್ನಪ್ಪಿದ್ದು, ಇತರೆ ಮೂವರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಸಚಿವಾಲಯದ ಪ್ರಕಾರ, ಉಕ್ರೇನ್‌ನ ಸಶಸ್ತ್ರ ಪಡೆಗಳು ಕ್ಲಸ್ಟರ್ ಯುದ್ಧ ಸಾಮಗ್ರಿಗಳನ್ನು ಬಳಸಿಕೊಂಡು ಶನಿವಾರ ಫಿರಂಗಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಆರ್‌ಐಎ ನೊವೊಸ್ಟಿ ಮತ್ತು ಇಜ್ವೆಸ್ಟಿಯಾದ ನಾಲ್ವರು ಪತ್ರಕರ್ತರು ಗಾಯಗೊಂಡಿದ್ದರು. ಇದರಲ್ಲಿ ಆರ್‌ಐಎ ನೊವೊಸ್ಟಿ ಪತ್ರಕರ್ತ ರೋಸ್ಟಿಸ್ಲಾವ್ ಜುರಾವ್ಲೆವ್ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. ರಷ್ಯಾದ ಈ ಹೇಳಿಕೆಗೆ ಉಕ್ರೇನ್ ಪ್ರತಿಕ್ರಿಯಿಸಿಲ್ಲ.
ರಷ್ಯಾ-ಉಕ್ರೇನ್ ಸಂಘರ್ಷ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 2014ರಲ್ಲಿ ಉಕ್ರೇನ್‌ನ ಕ್ರಿಮಿಯಾವನ್ನು ರಷ್ಯಾ ವಶಪಡಿಸಿಕೊಳ್ಳುವುದರಿಂದ ಅನಧಿಕೃತವಾಗಿ ಪ್ರಾರಂಭವಾಗಿದೆ. ಎರಡು ರಾಷ್ಟ್ರಗಳ ನಡುವೆ ನಡೆಯುತ್ತಿದ್ದ ಸಂಘರ್ಷ ಮತ್ತೆ 2022ರಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇವಲ ಕ್ರಿಮಿಯಾವಲ್ಲದೇ, ಉಕ್ರೇನ್‌ನ ಇತರ ಪ್ರಮುಖ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆಯಲು ರಷ್ಯಾ ಉಕ್ರೇನ್‌ನ ಮೇಲೆ ದಾಳಿ ನಡೆಸಿತು. ಇದೇ ದಾಳಿ-ಪ್ರತಿದಾಳಿಯಂತೆ ಮುಂದುವರೆಯುತ್ತಲೇ ಬಂದಿದೆ.