ಕೀವ್:ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಕಣ್ಗಾವಲು ಡ್ರೋನ್ ಅನ್ನು ರಷ್ಯಾದ ಯುದ್ಧ ವಿಮಾನಗಳು ಡಿಕ್ಕಿ ಹೊಡೆದು ಹಾಕಿವೆ. ಇದು ಉಭಯ ರಾಷ್ಟ್ರಗಳ ನಡುವಿನ ಅಸಮಾಧಾನ ಹೆಚ್ಚಿಸಿದೆ. ರಷ್ಯಾದ ಈ ನಡೆಗೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಅಂತಾರಾಷ್ಟ್ರೀಯ ಪ್ರದೇಶವಾದ ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಎಂಕ್ಯೂ-9 ಡ್ರೋನ್‌ಗೆ ರಷ್ಯಾದ 2 ಯುದ್ಧ ವಿಮಾನಗಳು ಡಿಕ್ಕಿ ಹೊಡೆದಿವೆ. ಇದಕ್ಕೂ ಮೊದಲು ಡ್ರೋನ್ ಮೇಲೆ ಜೆಟ್ನ ಇಂಧನ ಸುರಿದಿವೆ. ಬಳಿಕ ಅದು ಬೀಳದಿದ್ದಾಗ ವಿಮಾನಗಳೇ ಡಿಕ್ಕಿ ಹೊಡೆದು ಕಪ್ಪು ಸಮುದ್ರದಲ್ಲಿ ಬೀಳಿಸಿವೆ.
ಇದು ವೃತ್ತಿಪರ ಕೆಲಸವಲ್ಲ:ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಈ ಬಗ್ಗೆ ಅಧ್ಯಕ್ಷ ಜೋ ಬೈಡನ್ ಅವರಿಗೆ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ, ರಷ್ಯಾದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ, ಈ ರೀತಿಯ ಘಟನೆಗಳು ಉಭಯ ರಾಷ್ಟ್ರಗಳಿಗೆ ತಕ್ಕುದಲ್ಲ. ಇಂತಹ ಬೆದರಿಕೆಗಳಿಗೆ ದೇಶ ಬಗ್ಗುವುದಿಲ್ಲ. ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಹಾರಾಡುತ್ತಿರುವ ಡ್ರೋನ್ ಪತನಗೊಳಿಸಿದ್ದು, ಅಸುರಕ್ಷಿತ ಮತ್ತು ವೃತ್ತಿಪರವಲ್ಲದ ಕೆಲಸ ಎಂದು ಟೀಕಿಸಿದೆ.
ಶೀತಲ ಸಮರದ ಬಳಿಕ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ಮಧ್ಯೆ ತಿಕ್ಕಾಟ ನಡೆದಿದೆ. ಅಮೆರಿಕದ ಭದ್ರತಾ ಅಧಿಕಾರಿಗಳು ರಷ್ಯಾದ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಕಪ್ಪು ಸಮುದ್ರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ MQ-9 ಡ್ರೋನ್‌ನ ಮೇಲೆ ರಷ್ಯಾದ Su-27 ಫೈಟರ್ ಜೆಟ್‌ಗಳು ದಾಳಿ ಮಾಡಿದ್ದು, ಕಳವಳಕಾರಿ ಮತ್ತು ಅಸುರಕ್ಷಿತ ನಡೆಯಾಗಿದೆ ಎಂದು ಅಮೆರಿಕ ಹೇಳಿದೆ.