ಟೊರೊಂಟೊ (ಕೆನಡಾ):ರಷ್ಯಾ ವಿರುದ್ಧ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಬೆಂಬಲ ಗಳಿಸುವ ಪ್ರಯತ್ನವನ್ನು ಉಕ್ರೇನ್ ಪ್ರಧಾನಿ ವೊಲೊಡಿಮಿರ್ ಝೆಲೆನ್ಸ್ಕಿ ಮುಂದುವರೆಸಿದ್ದಾರೆ. ಉಕ್ರೇನ್ ಅಧ್ಯಕ್ಷರು ಶುಕ್ರವಾರ ಕೆನಡಾ ಸಂಸತ್ತು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ವಾಷಿಂಗ್ಟನ್‌ನಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಅಲ್ಲಿನ ಜನಪ್ರತಿನಿಧಿಗಳನ್ನು ಝೆಲೆನ್ಸ್ಕಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಕೆನಡಾಕ್ಕೆ ಭೇಟಿ ನೀಡಲಿರುವ ಉಕ್ರೇನ್ ಅಧ್ಯಕ್ಷರನ್ನು ಟ್ರುಡೊ ಸ್ವಾಗತಿಸಲಿದ್ದಾರೆ. ಇದಾದ ಬಳಿಕ ಝೆಲೆನ್ಸ್ಕಿ ಅಲ್ಲಿನ ಸಂಸತ್ತು ಉದ್ದೇಶಿಸಿ ಮಾತನಾಡುವರು ಎಂದು ಟ್ರುಡೊ ಕಚೇರಿ ಹೇಳಿದೆ. ಫೆಬ್ರವರಿ 2022ರಲ್ಲಿ ಶುರುವಾದ ರಷ್ಯಾ-ಉಕ್ರೇನ್ ಯುದ್ಧದ ನಂತರ ಕೆನಡಾಕ್ಕೆ ಝೆಲೆನ್ಸ್ಕಿಯ ಮೊದಲ ಭೇಟಿ ಇದಾಗಿದೆ. ಈ ಹಿಂದೆ, ಕೆನಡಾ ಸಂಸತ್ತು ಉದ್ದೇಶಿಸಿ ಆನ್‌ಲೈನ್‌ನಲ್ಲಿ ಮಾತನಾಡಿದ್ದರು.
ಝೆಲೆನ್ಸ್ಕಿ ಮತ್ತು ಟ್ರುಡೊ ಒಟ್ಟಾವಾದಿಂದ ಟೊರೊಂಟೊಗೆ ಪ್ರಯಾಣಿಸಲು ನಿರ್ಧರಿಸಲಾಗಿದೆ. ಅಲ್ಲಿ ಅವರು ಉಕ್ರೇನಿಯನ್ ಸಮುದಾಯದ ಸದಸ್ಯರನ್ನು ಭೇಟಿಯಾಗುವರು. ಉಕ್ರೇನ್‌ನ ಸುಮಾರು 1.4 ಮಿಲಿಯನ್ ಜನರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಇದು ಒಟ್ಟು ಜನಸಂಖ್ಯೆಯ ಸುಮಾರು ಶೇ 4 ರಷ್ಟಾಗಿದೆ.
ವಿಶ್ವಸಂಸ್ಥೆಯ ಕೆನಡಾ ರಾಯಭಾರಿ ಬಾಬ್ ವ್ರೇ ಮಾತನಾಡಿ, ನಾವು ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇವೆ. ಇನ್ನೂ ಹೆಚ್ಚಿನ ಸಹಾಯ ಮಾಡಬೇಕಿದೆ. ಉಕ್ರೇನ್ ಜನರಿಗೆ ನಾವು ಸಾಧ್ಯವಿರುವ ಎಲ್ಲ ರೀತಿಯ ಸಹಾಯ ಒದಗಿಸುತ್ತೇವೆ ಎಂದು ಹೇಳಿದರು. ಈಗಾಗಲೇ ಉಕ್ರೇನ್‌ಗೆ ಕೆನಡಾ 8.9 ಬಿಲಿಯನ್ ಕೆನಡಿಯನ್ ಡಾಲರ್ ನೀಡಿದೆ. ಝೆಲೆನ್ಸ್ಕಿ ಮೊದಲ ಬಾರಿಗೆ 2019ರಲ್ಲಿ ಕೆನಡಾಕ್ಕೆ ಅಧಿಕೃತ ಭೇಟಿ ನೀಡಿದ್ದರು ಎಂದರು.
ಅಮೆರಿಕದಲ್ಲಿ ಝೆಲೆನ್ಸ್ಕಿ: ಗುರುವಾರ ರಷ್ಯಾದ ಕ್ಷಿಪಣಿಗಳು ಉಕ್ರೇನ್‌ನ ಖಾರ್ಕಿವ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ದಾಳಿ ಮಾಡಿದ್ದು, ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಝೆಲೆನ್ಸ್ಕಿ 2,400 ಕೋಟಿ ಡಾಲರ್ ಮೌಲ್ಯದ ನೆರವು ಪ್ಯಾಕೇಜ್ಗಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಚರ್ಚಿಸಿದ್ದರು.
ಉಕ್ರೇನ್‌ಗೆ ಹೊಸ ಭದ್ರತಾ ನೆರವಿನ ಪ್ಯಾಕೇಜ್ ಅನ್ನು ಅಧ್ಯಕ್ಷ ಬೈಡನ್ ಘೋಷಿಸಿದ್ದಾರೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಇದರಲ್ಲಿ 128 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಅಮೆರಿಕ ನೀಡಲಿದೆ. ಇದರೊಂದಿಗೆ, ರಕ್ಷಣಾ ಇಲಾಖೆಯು ಹಿಂದೆ ನಿರ್ದೇಶಿಸಿದ ಡ್ರಾಡೌನ್ ಅಡಿಯಲ್ಲಿ $197 ಮಿಲಿಯನ್ ನೆರವು ಪ್ಯಾಕೇಜ್ನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಒದಗಿಸುತ್ತದೆ. ಈ ಪ್ಯಾಕೇಜ್ನಲ್ಲಿ ರಷ್ಯಾದ ವಾಯುದಾಳಿಯ ವಿರುದ್ಧ ಉಕ್ರೇನ್‌ನ ವಾಯುರಕ್ಷಣೆ ಬಲಪಡಿಸಲು ಶಸ್ತ್ರಾಸ್ತ್ರಗಳು ಮತ್ತು ಹೆಚ್ಚುವರಿ ವಾಯು ರಕ್ಷಣಾ ಶಸ್ತ್ರಾಸ್ತ್ರಗಳು ಒಳಗೊಂಡಿವೆ ಎಂದು ಬ್ಲಿಂಕೆನ್ ತಿಳಿಸಿದ್ದಾರೆ.
ಇದನ್ನೂ ಓದಿ:ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಬೈಡನ್- ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ