ವಾಷಿಂಗ್ಟನ್ : ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ನಡೆಯಲಿರುವ ಎರಡು ದಿನಗಳ ನ್ಯಾಟೋ ಶೃಂಗಸಭೆಯಲ್ಲಿ ಯುಎಸ್ ಮತ್ತು ಉಕ್ರೇನ್ ಅಧ್ಯಕ್ಷರಾದ ಜೋ ಬೈಡನ್ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿಯಾಗಲಿದ್ದಾರೆ. ಕೀವ್ ಗೆ ನ್ಯಾಟೋ ಮಿಲಿಟರಿ ಒಕ್ಕೂಟದ ಸದಸ್ಯತ್ವ ನೀಡುವ ಬಗ್ಗೆ ಈ ಸಮಯದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ. ಉಭಯ ನಾಯಕರು ಶೃಂಗಸಭೆಯ ಎರಡನೇ ದಿನವಾದ ಬುಧವಾರದಂದು ಭೇಟಿಯಾಗಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವದ ವಿಷಯವೇ ಎರಡು ದಿನಗಳ ಶೃಂಗಸಭೆಯ ಮುಖ್ಯ ವಿಷಯವಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಯುದ್ಧ ನಡೆದಿದೆ. ಈ ಮಧ್ಯೆ ತಮ್ಮ ರಾಷ್ಟ್ರಕ್ಕೆ ನ್ಯಾಟೋ ಸದಸ್ಯತ್ವ ನೀಡಬೇಕೆಂದು ಝೆಲೆನ್ಸ್ಕಿ ಹಲವಾರು ತಿಂಗಳುಗಳಿಂದ ಒತ್ತಾಯಿಸುತ್ತಿದ್ದಾರೆ.
ಆದರೆ ಯುದ್ಧ ನಡೆಯುತ್ತಿರುವ ಮಧ್ಯದಲ್ಲೇ ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಿಕೊಳ್ಳುವುದು ಸಾಧ್ಯವಾಗಲಾರದು ಎಂಬುದು ಬಹುತೇಕ ನ್ಯಾಟೋ ಸದಸ್ಯ ರಾಷ್ಟ್ರಗಳ ಅಭಿಪ್ರಾಯವಾಗಿದೆ. ಈ ಸಮಯದಲ್ಲಿ ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡಿದಲ್ಲಿ, ಇದರಿಂದ ಕೆರಳುವ ರಷ್ಯಾ ನೇರವಾಗಿ ಪರಮಾಣು ಸಂಘರ್ಷಕ್ಕಿಳಿಯುವ ಆತಂಕವಿದೆ. ಯುದ್ಧ ಮುಗಿಯುವವರೆಗೂ ನ್ಯಾಟೋ ಸದಸ್ಯತ್ವದ ಬಗ್ಗೆ ನಿರೀಕ್ಷಿಸುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿರುವರಾದರೂ, ಅದರ ನಂತರ ತನ್ನ ರಾಷ್ಟ್ರಕ್ಕೆ ಆ ಸ್ಥಾನಮಾನ ನೀಡುವ ಬಗ್ಗೆ ಸ್ಪಷ್ಟ ಭರವಸೆ ನೀಡಬೇಕೆಂದು ಕೇಳಿದ್ದಾರೆ.
ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ನೀಡುವ ಸಮಯ ಇನ್ನೂ ಬಂದಿಲ್ಲ. ಮೊದಲಿಗೆ ರಷ್ಯಾ ತನ್ನ ಆಕ್ರಮಣವನ್ನು ಹಿಂಪಡೆಯಲಿ ಎಂದು ಭಾನುವಾರ ರಾತ್ರಿ ಮಾಧ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಕೀವ್‌ಗೆ ನ್ಯಾಟೋ ಸದಸ್ಯತ್ವ ನೀಡುವ ಮಾತುಕತೆಗಳು ಅಕಾಲಿಕವಾಗಿದ್ದರೂ ಯುಎಸ್ ಮತ್ತು ಮೈತ್ರಿಯಲ್ಲಿರುವ ಅದರ ಮಿತ್ರರಾಷ್ಟ್ರಗಳು ಝೆಲೆನ್ಸ್ಕಿ ಮತ್ತು ಅವರ ಪಡೆಗಳಿಗೆ ಅಗತ್ಯವಿರುವ ಭದ್ರತೆ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ ಎಂದು ಅವರು ಹೇಳಿದರು.