ಮಾಸ್ಕೋ: ಭವಿಷ್ಯದಲ್ಲಿ ಅಮೆರಿಕದ ಯಾವುದೇ ಪ್ರಚೋದನೆಗಳಿಗೆ ರಷ್ಯಾ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಹೇಳಿದ್ದಾರೆ. ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕದ ಮಿಲಿಟರಿ ಡ್ರೋನ್ ಒಂದನ್ನು ರಷ್ಯಾದ ಎಸ್‌ಯು- 27 ಫೈಟರ್ ಜೆಟ್ ಹೊಡೆದುರುಳಿಸಿದ ಒಂದು ದಿನದ ನಂತರ ಬಂದಿರುವ ರಷ್ಯಾ ರಕ್ಷಣಾ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ರಷ್ಯಾದ ಗಡಿಯ ಬಳಿ ಹಾರಾಡುತ್ತಿದ್ದ ಯುಎಸ್ ಡ್ರೋನ್‌ಗಳಿಗೆ ನೀಡಿದ ಪ್ರತಿಕ್ರಿಯೆಯ ಮಾದರಿಯಲ್ಲಿಯೇ ಮುಂದಿನ ಎಲ್ಲಾ ಪ್ರಚೋದನೆಗಳಿಗೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುವುದನ್ನು ರಷ್ಯಾ ಮುಂದುವರಿಸುತ್ತದೆ ಎಂದು ಸೆರ್ಗೆ ಶೋಯಿಗು ಹೇಳಿದರು.
ಈ ವರ್ಷದ ಮಾರ್ಚ್ 14 ರಂದು ಕಪ್ಪು ಸಮುದ್ರದಲ್ಲಿ ಅಮೆರಿಕದ ಮಾನವರಹಿತ ವೈಮಾನಿಕ ವಾಹನ ಹೊಡೆದುರುಳಿಸಿದ ಘಟನೆಯ ಕಾರಣಗಳು ಮತ್ತು ಪರಿಣಾಮಗಳ ಬಗ್ಗೆ ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ವಿಶೇಷ ಕಾರ್ಯಾಚರಣೆಯ ಕಾರಣದಿಂದಾಗಿ ನಿರ್ದಿಷ್ಟ ಪ್ರದೇಶದಲ್ಲಿ ರಷ್ಯಾ ವಿಮಾನ ಹಾರಾಟಗಳನ್ನು ನಿರ್ಬಂಧಿಸಿತ್ತು. ಆದರೆ ಅಮೆರಿಕನ್ ಪಡೆಗಳು ಈ ನಿರ್ಬಂಧವನ್ನು ಉಲ್ಲಂಘಿಸಿದ ಕಾರಣದಿಂದ ಈ ಘಟನೆಯು ಸಂಭವಿಸಿದೆ. ರಷ್ಯಾವನ್ನು ಗುರಿಯಾಗಿಸಿಕೊಂಡು ಗುಪ್ತಚರ ಮಾಹಿತಿಯನ್ನು ಕಲೆ ಹಾಕಿದ್ದರಿಂದ ಇಂಥ ಕ್ರಮ ಕೈಗೊಳ್ಳಬೇಕಾಯಿತು ಎಂದು ಸಚಿವಾಲಯ ಹೇಳಿದೆ.
ಕ್ರಿಮಿಯನ್ ಕರಾವಳಿಯ (Crimean coastline - ಒಂದು ಪ್ರದೇಶದ ಹೆಸರು) ಬಳಿ ಅಮೆರಿಕ ಡ್ರೋನ್‌ಗಳ ಹಾರಾಟ ಪ್ರಚೋದನಕಾರಿಯಾಗಿದ್ದು, ಪರಿಸ್ಥಿತಿಯು ಉಲ್ಬಣಗೊಳ್ಳುವ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ ಎಂದು ರಷ್ಯಾ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ಆದರೆ, ಅಂತರ ರಾಷ್ಟ್ರೀಯ ಕಾನೂನು ಅನುಮತಿಸುವ ಎಲ್ಲ ಕಡೆಗೂ ಅಮೆರಿಕ ತನ್ನ ವಿಮಾನಗಳ ಹಾರಾಟವನ್ನು ಮುಂದುವರಿಸುತ್ತದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ರಷ್ಯಾಕ್ಕೆ ತಿಳಿಸಿದ್ದಾರೆ. ರಷ್ಯಾದ ಎಸ್‌ಯು -27 ಫೈಟರ್ ಜೆಟ್ ಕಪ್ಪು ಸಮುದ್ರದ ಮೇಲೆ ಅಮೆರಿಕದ ಮಿಲಿಟರಿ ಡ್ರೋನ್ ಅನ್ನು ಉರುಳಿಸಿದ ನಂತರ ಯುಎಸ್ ರಕ್ಷಣಾ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದರು.
ಯಾವುದೇ ಭ್ರಮೆಯಲ್ಲಿರಬೇಡಿ, ಅಮೆರಿಕ ತನ್ನ ವಿಮಾನಗಳ ಹಾರಾಟವನ್ನು ಮುಂದುವರೆಸುತ್ತದೆ ಮತ್ತು ಅಂತಾರಾಷ್ಟ್ರೀಯ ಕಾನೂನು ಅನುಮತಿಸುವಲ್ಲೆಲ್ಲಾ ನಮ್ಮ ವಿಮಾನಗಳು ಕಾರ್ಯನಿರ್ವಹಿಸುತ್ತದೆ. ಹೀಗಾಗಿ ರಷ್ಯಾ ತನ್ನ ಮಿಲಿಟರಿ ವಿಮಾನಗಳ ಹಾರಾಟವನ್ನು ಸುರಕ್ಷಿತ ಮತ್ತು ವೃತ್ತಿಪರ ರೀತಿಯಲ್ಲಿ ನಿರ್ವಹಿಸುವುದು ಅದರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಎರಡೂ ದೇಶಗಳ ಮಧ್ಯೆ ವಾಸ್ತವದಲ್ಲಿ ಭೌತಿಕ ಸಂಘರ್ಷ ನಡೆದಿರುವುದು ಇದೇ ಮೊದಲು. ಅಮೆರಿಕದ MQ-9 ಮಾನವರಹಿತ ವೈಮಾನಿಕ ವಾಹನವು ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ವಾಯುಪ್ರದೇಶದ ಗಡಿಯನ್ನು ದಾಟಿ ಬಂದಿತ್ತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ಏತನ್ಮಧ್ಯೆ, ಅಮೆರಿಕದಲ್ಲಿ ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ ಅವರನ್ನು ಕರೆಸಿದ ಯುಎಸ್ ಸ್ಟೇಟ್ ಡಿಪಾರ್ಟಮೆಂಟ್, ಘಟನೆಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಯುದ್ಧದ ಮಧ್ಯೆ ಉಕ್ರೇನ್ಗೆ ದಿಢೀರ್ ಭೇಟಿ ನೀಡಿದ ಜೋ ಬೈಡನ್! ಕಾರಣವೇನು?