ಮಾಸ್ಕೋ:ಉಕ್ರೇನ್ ಮೇಲಿನ ಯುದ್ಧಾಪರಾಧ ಪ್ರಕರಣದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಪುಟಿನ್ ಬಂಧನಕ್ಕೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕೋರ್ಟ್ ಮನವಿ ಮಾಡಿದೆ. ಆದರೆ, ಕೋರ್ಟ್‌ನ ವ್ಯಾಪ್ತಿಯನ್ನೇ ರಷ್ಯಾ ಪ್ರಶ್ನಿಸಿದ್ದು, ವಾರಂಟ್ ಅರ್ಥಹೀನವಾಗಿದೆ ಎಂದು ಹೇಳಿದೆ.
ಉಕ್ರೇನ್ ಮೇಲೆ ವರ್ಷದಿಂದ ಸತತವಾಗಿ ಯುದ್ಧ ಸಾರಿರುವ ರಷ್ಯಾ ಅಲ್ಲಿನ ಮಕ್ಕಳನ್ನು ಅಪಹರಣ ಮಾಡಲಾಗಿದೆ. ರಷ್ಯಾಕ್ಕೆ ಮಕ್ಕಳನ್ನು ಕಾನೂನುಬಾಹಿರವಾಗಿ ವರ್ಗ ಮಾಡಿದ ಪ್ರಕರಣದಲ್ಲಿ ವ್ಲಾಡಿಮಿರ್ ಪುಟಿನ್ ಬಂಧನಕ್ಕಾಗಿ ಅಂತಾರಾಷ್ಟ್ರೀಯ ಕೋರ್ಟ್ ಸೂಚಿಸಿದೆ. ಆದರೆ, ನಮ್ಮಲ್ಲಿ ಯಾವುದೇ ಪೊಲೀಸ್ ಪಡೆ ಇಲ್ಲದ ಕಾರಣ, ಪುಟಿನ್ ಬಂಧನ ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಿಟ್ಟಿದ್ದು ಎಂದು ಹೇಳಿದೆ.
ರಷ್ಯಾ ಟೀಕೆ, ಗೇಲಿ:ಇನ್ನು ಅಂತಾರಾಷ್ಟ್ರೀಯ ಅಪರಾಧ ಕೋರ್ಟ್ ಹೊರಡಿಸಿದ ಬಂಧನ ವಾರಂಟ್ ಅನ್ನು ರಷ್ಯಾ ಗೇಲಿ ಮಾಡಿದೆ. ಕಾನೂನು ದೃಷ್ಟಿಯಲ್ಲಿ ಇದು ಅರ್ಥಹೀನವಾಗಿದೆ. ನಾವು ಐಸಿಸಿ ಒಪ್ಪಂದದಿಂದ 2016 ರಲ್ಲೇ ಹೊರಬಂದಿದ್ದೇವೆ. ಅಂತಾರಾಷ್ಟ್ರೀಯ ಕೋರ್ಟ್‌ನ ಯಾವುದೇ ನಿಬಂಧನೆಗಳು ನಮಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಶುಕ್ರವಾರ ಹೊರಡಿಸಿದ ವಾರಂಟ್ ಅನ್ನು ತಿರಸ್ಕರಿಸಿ, ರಷ್ಯಾ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನ ಸದಸ್ಯ ರಾಷ್ಟ್ರವಾಗಿಲ್ಲ. ಅದರ ಅಡಿ ಯಾವುದೇ ಬಾಧ್ಯತೆಗಳನ್ನು ನಾವು ಹೊಂದಿಲ್ಲ. ರಷ್ಯಾ ಕೋರ್ಟ್ನೊಂದಿಗೆ ಸಹಕರಿಸುವುದಿಲ್ಲ. ಇಲ್ಲಿಂದ ಹೊರಡಿಸುವ ಯಾವುದೇ ಆದೇಶಗಳು ಕಾನೂನುಬದ್ಧವಾಗಿ ಅನೂರ್ಜಿತವಾಗುತ್ತವೆ. ಇನ್ನು ಬಂಧನಕ್ಕಾಗಿ ಸೂಚಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಟಾಯ್ಲೆಟ್ ಪೇಪರ್‌ಗೆ ವಾರಂಟ್ ಹೋಲಿಕೆ:ಇನ್ನು, ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅವರು, ಪುಟಿನ್ ಅವರ ವಿರುದ್ಧ ಅಂತಾರಾಷ್ಟ್ರೀಯ ಅಪರಾಧ ಕೋರ್ಟ್ ಹೊರಡಿಸಿದ ಬಂಧನ ವಾರಂಟ್ ಅನ್ನು ಟಾಯ್ಲೆಟ್ ಪೇಪರ್‌ಗೆ ಹೋಲಿಸಿದ್ದಾರೆ. ಟ್ವೀಟ್ ಮಾಡಿರುವ ಮೆಡ್ವೆಡೆವ್, "ಐಸಿಸಿ ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಈ ನೋಟಿಸ್ ಕಾಗದವನ್ನು ಎಲ್ಲಿ ಬಳಸಬೇಕು ಎಂಬುದನ್ನು ವಿವರಿಸುವ ಅಗತ್ಯವಿಲ್ಲ" ಎಂದು ಟಾಯ್ಲೆಟ್ ಪೇಪರ್ ಎಮೋಜಿಯೊಂದಿಗೆ ಗೇಲಿ ಮಾಡಿದ್ದಾರೆ.
ಐಸಿಸಿ ಆರೋಪವೇನು?:ಶುಕ್ರವಾರವಷ್ಟೇ ಅಂತಾರಾಷ್ಟ್ರೀಯ ಅಪರಾಧ ಕೋರ್ಟ್, ರಷ್ಯಾ ಅಧ್ಯಕ್ಷರ ಬಂಧನಕ್ಕಾಗಿ ಬಂಧನ ವಾರಂಟ್ ಹೊರಡಿಸಿದೆ. ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡೀಪಾರು ಮಾಡುವ ಮೂಲಕ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗಿದೆ. ಇದಕ್ಕೆ ಕಾರಣರಾದ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಅಧಿಕಾರಿ ಮಾರಿಯಾ ಅಲೆಕ್ಸೆಯೆವ್ನಾರನ್ನು ಬಂಧಿಸಬೇಕು ಎಂದು ವಾರಂಟ್ನಲ್ಲಿ ಸೂಚಿಸಿದೆ.
ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ಮಾಡಿದ ಯುದ್ಧ ಅಪರಾಧಗಳಿಗೆ ರಷ್ಯಾದ ಅಧ್ಯಕ್ಷರೇ ಹೊಣೆಗಾರರು. ಅಲ್ಲಿನ ಮಕ್ಕಳನ್ನು ಯುದ್ಧದ ವೇಳೆ ಅಪಹರಣ ಮಾಡಲಾಗಿದೆ. ಅವರನ್ನು ಕಾನೂನುಬಾಹಿರವಾಗಿ ರಷ್ಯಾಕ್ಕೆ ಕರೆತರಲಾಗಿದೆ. ಮಕ್ಕಳ ಹಕ್ಕುಗಳ ಅಧಿಕಾರಿಯಾದ ಮಾರಿಯಾ ಅಲೆಕ್ಸೆಯೆವ್ನಾ ಲ್ವೊವಾ ಬೆಲೋವಾ ಅವರು ಇದಕ್ಕೆ ಅನುಮತಿ ನೀಡಿದ್ದು, ಅವರನ್ನೂ ಬಂಧಿಸಬೇಕು ಎಂದು ವಾರಂಟ್ ನೀಡಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಲ್ಲಿನ ನಾಗರಿಕರು ಸಾವಿಗೀಡಾಗಲು ಕಾರಣವಾಗುವ ಮೂಲಕ ನರಹತ್ಯೆ ನಡೆಸಿದೆ. ಇದಕ್ಕೆ ರಷ್ಯಾ ಅಧ್ಯಕ್ಷರೇ ನೇರ ಕಾರಣವಾಗಿದ್ದಾರೆ ಎಂದು ಆರೋಪಿಸಿದೆ. ಕೋರ್ಟ್ ವ್ಯಾಪ್ತಿಯಲ್ಲಿ ಯಾವುದೇ ಪೊಲೀಸ್ ಪಡೆ ಇಲ್ಲದ ಕಾರಣ, ಪುಟಿನ್ ಬಂಧನ ಅಂತಾರಾಷ್ಟ್ರೀಯ ಸಮುದಾಯಕ್ಕೆ ಬಿಟ್ಟಿದ್ದಾಗಿದೆ ಎಂದು ಹೇಳಿದೆ.
ಓದಿ:ಪಾಕಿಸ್ತಾನದಲ್ಲಿ ಔಷಧ ದಾಸ್ತಾನು ಸಂಪೂರ್ಣ ಖಾಲಿ: ಆರೋಗ್ಯ ವ್ಯವಸ್ಥೆ ಕುಸಿತ!