ನವದೆಹಲಿ:ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸ್ಥಾನ ಪಡೆಯಲು ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ರಷ್ಯಾ ಸೋಮವಾರ ಹೇಳಿದೆ. ಭಾರತದ ಹಕ್ಕನ್ನು ರಷ್ಯಾ ಅನುಮೋದಿಸುತ್ತದೆ. ಈ ಬಗ್ಗೆ ಉಭಯ ರಾಷ್ಟ್ರಗಳು ಚರ್ಚಿಸಿವೆ ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬೇರೆ ರಾಷ್ಟ್ರಗಳು ಸ್ಥಾನ ಪಡೆಯುವುದು ಸಮಂಜಸವಾಗಿದೆ. ಅದರಲ್ಲೂ ಭಾರತಕ್ಕೆ, ರಷ್ಯಾ ಪೂರ್ಣ ಬೆಂಬಲ ನೀಡಲಿದೆ. ಡಿಸೆಂಬರ್‌ನಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವರ ನಡುವೆ ಈ ವಿಷಯದ ಬಗ್ಗೆ ಗಹನವಾಗಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ಭಾರತಕ್ಕಿದು ಸಕಾಲ:ಭದ್ರತಾ ಮಂಡಳಿಗಳ ಮುಖ್ಯಸ್ಥರು, ವಿದೇಶಾಂಗ ಮಂತ್ರಿಗಳು ಕಳೆದ ವರ್ಷ 7 ಬಾರಿ ಭೇಟಿಯಾಗಿದ್ದಾರೆ. ಸಭೆಗಳಲ್ಲಿ ಮಂಡಳಿ ಸದಸ್ಯತ್ವ ನವೀಕರಣದ ಬಗ್ಗೆ ಚರ್ಚೆಗಳು ನಡೆದಿವೆ. ಮಂಡಳಿಯಲ್ಲಿ ಭಾರತ ಸದಸ್ಯತ್ವ ಪಡೆಯುವುದು ಸಕಾಲವಾಗಿದೆ. ಇದಕ್ಕೆ ರಷ್ಯಾ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 5 ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದರು. ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ, ಜಾಗತಿಕ ಸಮಸ್ಯೆಗಳಾದ ಇಂಡೋ-ಪೆಸಿಫಿಕ್, ಉಕ್ರೇನ್ ಸಂಘರ್ಷ ಮತ್ತು ಗಾಜಾ ಕುರಿತು ವ್ಯಾಪಕ ಚರ್ಚೆ ನಡೆಸಿದ್ದರು.