ಮಾಸ್ಕೋ(ರಷ್ಯಾ):ಉಕ್ರೇನ್ ವಿರುದ್ಧದ ಸಮರದಲ್ಲಿ ಪಾಶ್ಚಿಮಾತ್ಯ ದೇಶಗಳ ಹಸ್ತಕ್ಷೇಪ ಹೆಚ್ಚಾದರೆ ಪರಮಾಣು ಯುದ್ಧದಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಈಗಾಗಲೇ ಎಚ್ಚರಿಕೆ ನೀಡಿರುವ ರಷ್ಯಾ, ಪರಮಾಣು ಪರೀಕ್ಷೆಗೆ ಒತ್ತು ನೀಡುತ್ತಿರುವುದು ಆತಂಕ ಉಂಟುಮಾಡಿದೆ. ಅಮೆರಿಕಕ್ಕೆ ಸರಿಸಮನಾಗಿ ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆಯ ಈ ಒಪ್ಪಂದದಿಂದ ಹಿಂದೆ ಸರಿದಿರುವ ಕ್ರೆಮ್ಲಿನ್, ಪರಮಾಣು ಜಲಾಂತರ್ಗಾಮಿಯಿಂದ ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷಿಸುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದೆ.
ಕ್ಷಿಪಣಿ ಪರೀಕ್ಷೆಗೆ ಸಂಬಂಧಿಸಿದ ವಿಡಿಯೋವನ್ನು ರಷ್ಯಾ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದೆ. ಸಮುದ್ರದಿಂದ ಉಡಾವಣೆಯಾಗುವ ಖಂಡಾಂತರ ಕ್ಷಿಪಣಿ ಬುಲಾವಾವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದಾಗಿ ಘೋಷಿಸಿದೆ. ಆರ್ಕ್ಟಿಕ್ ಸಮುದ್ರದ ಯುರೋಪಿಯನ್ ರಾಷ್ಟ್ರಗಳ ಕರಾವಳಿಯ ಸಮುದ್ರದಲ್ಲಿ ಇದನ್ನು ಪರೀಕ್ಷಿಸಲಾಗಿದೆ ಎಂದು ರಷ್ಯಾ ತಿಳಿಸಿದೆ. ನಾವು ಪರಮಾಣು ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಗುರಿ ಮುಟ್ಟಿದ್ದೇವೆ ಎಂದು ಹೇಳಿಕೊಂಡಿದೆ. 12-ಮೀಟರ್ (40-ಅಡಿ) ಉದ್ದದ ಬುಲಾವಾ ಕ್ಷಿಪಣಿ ಅಂದಾಜು 8000 ಕಿ.ಮೀ (5,000 ಮೈಲುಗಳು) ವ್ಯಾಪ್ತಿಯನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿ ಆರು ಪರಮಾಣು ಸಿಡಿತಲೆಗಳನ್ನು ಹೊತ್ತು ಸಾಗಬಲ್ಲುದು.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮತ್ತೆ ಪರಮಾಣು ಪರೀಕ್ಷೆಯತ್ತ ಹೆಜ್ಜೆ ಹಾಕುತ್ತಿದ್ದು, ಪಶ್ಚಿಮದಿಂದ ಬೆದರಿಕೆ ಎದುರಿಸುವ ನಿರೀಕ್ಷೆಯಲ್ಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ರಷ್ಯಾ ಮತ್ತು ಅಮೆರಿಕ ಪರಸ್ಪರ ಪೈಪೋಟಿಯಲ್ಲಿ ಅಣ್ವಸ್ತ್ರ ಪರೀಕ್ಷೆ ಆರಂಭಿಸಿದರೆ ಚೀನಾ, ಭಾರತ, ಪಾಕಿಸ್ತಾನದಂತಹ ರಾಷ್ಟ್ರಗಳೂ ಪರಮಾಣು ಪರೀಕ್ಷಾ ಸ್ಪರ್ಧೆಯನ್ನು ಹೆಚ್ಚಿಸಬಹುದು ಎಂಬುದು ಶಸ್ತ್ರಾಸ್ತ್ರ ನಿಯಂತ್ರಣ ತಜ್ಞರ ಅಭಿಪ್ರಾಯ.