ವಿಶ್ವಸಂಸ್ಥೆ:ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಆಹಾರ ಮತ್ತು ಶಕ್ತಿಯಿಂದ ಹಿಡಿದು ಅಪಹರಣಕ್ಕೊಳಗಾದ ಮಕ್ಕಳವರೆಗೆ ಎಲ್ಲವನ್ನೂ ಶಸ್ತ್ರಾಸ್ತ್ರಗಳನ್ನಾಗಿ ತಯಾರು ಮಾಡುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಾರ್ಷಿಕ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, "ಒಂದು ರಾಷ್ಟ್ರದ ವಿರುದ್ಧ ದ್ವೇಷವನ್ನು ಅಸ್ತ್ರಗೊಳಿಸಿದಾಗ, ಅದೆಂದಿಗೂ ನಿಲ್ಲಲಾರದು. ನಮ್ಮ ಭೂಮಿ, ನಮ್ಮ ಜನ ಮತ್ತು ಸಂಪನ್ಮೂಲಗಳನ್ನು ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಅವುಗಳನ್ನು ನಮ್ಮ ವಿರುದ್ಧವೇ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವುದು ರಷ್ಯಾ ಯುದ್ಧದ ಗುರಿ" ಎಂದರು.
ಉಕ್ರೇನ್ ಮೇಲಿನ ಯುದ್ಧವು ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಪ್ರಮುಖ ಜಾಗತಿಕ ಪೂರೈಕೆ ಅಡೆತಡೆಗಳನ್ನು ಇನ್ನೂ ಹೆಚ್ಚಿಸಿದೆ. ಆಹಾರ ಮತ್ತು ಇಂಧನ ಬೆಲೆಗಳಲ್ಲಿ ಭಾರಿ ಏರಿಕೆ ಉಂಟು ಮಾಡಿದೆ. ಇದು ಜಾಗತಿಕ ಆರ್ಥಿಕತೆಯನ್ನು ಕುಗ್ಗಿಸುತ್ತದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಕಷ್ಟ ಹೆಚ್ಚಿಸಿದೆ. ರಷ್ಯಾ ಮತ್ತು ಉಕ್ರೇನ್ ಎರಡೂ ಪ್ರಮುಖ ಧಾನ್ಯ ರಫ್ತುದಾರರು. ಕಳೆದ ಬೇಸಿಗೆಯಲ್ಲಿ ರಷ್ಯಾ ಕಪ್ಪು ಸಮುದ್ರದ ಮೂಲಕ ಉಕ್ರೇನಿಯನ್ ಧಾನ್ಯದ ಸಾಗಣೆಯನ್ನು ಅನುಮತಿಸುವ ಒಪ್ಪಂದವನ್ನು ಹಿಂತೆಗೆದುಕೊಂಡಿದ್ದು, ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಹೇಳಿದರು.
ಉಕ್ರೇನ್ ಆಕ್ರಮಣದ ವೇಳೆ ಹತ್ತಾರು ಸಾವಿರ ಮಕ್ಕಳನ್ನು ಅಪಹರಿಸಲಾಗಿದೆ. ರಷ್ಯಾದಲ್ಲಿನ ಆ ಮಕ್ಕಳಿಗೆ ಉಕ್ರೇನ್ ದೇಶವನ್ನು ದ್ವೇಷಿಸಲು ಕಲಿಸಲಾಗುತ್ತಿದೆ. ಅವರ ಕುಟುಂಬಗಳೊಂದಿಗಿನ ಎಲ್ಲಾ ಸಂಬಂಧಗಳು ಮುರಿದು ಹೋಗಿವೆ. ಇದು ಸ್ಪಷ್ಟವಾಗಿ ನರಮೇಧಕ್ಕೆ ಸಮ ಎಂದು ಆಕ್ರೋಶ ವ್ಯಕ್ತಪಡಿಸಿದರು.