ಬೆರಿಸ್ಲಾವ್ (ಉಕ್ರೇನ್): ಅಂತಾರಾಷ್ಟ್ರೀಯ ಮಾಧ್ಯಮವೊಂದು ಪಡೆದ ವಿಶೇಷ ಡ್ರೋನ್ ಫೋಟೋಗಳು ಮತ್ತು ಮಾಹಿತಿಯ ಪ್ರಕಾರ, ಈ ತಿಂಗಳ ಆರಂಭದಲ್ಲಿ ರಷ್ಯಾದ ನಿಯಂತ್ರಣದಲ್ಲಿದ್ದ ಉಕ್ರೇನಿಯನ್ ಅಣೆಕಟ್ಟನ್ನು ಉರುಳಿಸುವ ಉದ್ದೇಶ ಮತ್ತು ಅವಕಾಶವನ್ನು ರಷ್ಯಾ ಹೊಂದಿತ್ತು ಎಂದು ತಿಳಿಸಿದೆ.
ಕಾಖೋವ್ಕಾ ಅಣೆಕಟ್ಟಿನ ಮೇಲಿನಿಂದ ತೆಗೆದ ಕೆಲ ಫೋಟೋಗಳಲ್ಲಿ ಸ್ಫೋಟಕ ತುಂಬಿದ ಕಾರನ್ನು ಕಾಣಬಹುದು. ರಷ್ಯಾದ ಪಡೆಗಳು ಉದ್ದೇಶಪೂರ್ವಕವಾಗಿ ಅಣೆಕಟ್ಟನ್ನು ನಾಶಪಡಿಸಿದೆ. ಈ ಸ್ಫೋಟವು ಕೇಂದ್ರೀಕೃತವಾಗಿತ್ತು ಎಂದು ಎಂದು ಉಕ್ರೇನಿಯನ್ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ, ರಷ್ಯಾದ ರಕ್ಷಣಾ ಸಚಿವಾಲಯವು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಣೆಕಟ್ಟಿನ ವಿನಾಶವು ಮಾರಣಾಂತಿಕ ಪ್ರವಾಹಕ್ಕೆ ಕಾರಣವಾಯಿತು, ಡ್ನೀಪರ್ ನದಿಯ ದ್ವೀಪದಲ್ಲಿ ವಾಸಿಸುತ್ತಿದ್ದ ನೂರಾರು ಜನರು ಮಿಲಿಟರಿ ದೋಣಿ ಹಾಗೂ ತೆಪ್ಪಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ರೆಡ್ ಕ್ರಾಸ್ ತಂಡಗಳು ಜನರನ್ನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿತ್ತು. ಜೊತೆಗೆ, ಬ್ರೆಡ್‌ಬಾಸ್ಕೆಟ್‌ನಲ್ಲಿ ಅಳಿವಿನಂಚಿನಲ್ಲಿರುವ ಬೆಳೆಗಳು ನಾಶವಾಗಿದ್ದು, ಸಾವಿರಾರು ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು.
ಸ್ಫೋಟದ ನಂತರ ಸಂಭವಿಸಿದ ಬೃಹತ್ ಪ್ರವಾಹದ ವೇಳೆ ರಷ್ಯಾ ಕೆಲ ಪ್ರಯೋಜನ ಪಡೆದಿದೆ, ಆದರೂ ಅದು ಆಕ್ರಮಿಸಿಕೊಂಡಿರುವ ಪ್ರದೇಶಗಳು ಸಹ ಪ್ರವಾಹಕ್ಕೆ ಸಿಲುಕ್ಕಿದ್ದವು. ರಷ್ಯಾ ಆಕ್ರಮಿತ ನೋವಾ ಕಾಖೋವ್ಕಾ ನಗರ ಜಲಾವೃತಗೊಂಡಿತ್ತು. ಈ ಸ್ಫೋಟವನ್ನು ರಷ್ಯಾ ಪಡೆಗಳು ನಡೆಸಿರುವ 'ಇಕೋಸೈಡ್' (ಪರಿಸರ ಹತ್ಯಾಕಾಂಡ) ಎಂದು ಉಕ್ರೇನ್ ಆಡಳಿತ ವ್ಯಾಖ್ಯಾನಿಸಿದೆ. ಆದರೆ, ಇದಕ್ಕೆ ಉಕ್ರೇನ್ ಹೊಣೆ ಎಂದು ರಷ್ಯಾ ಆರೋಪಿಸಿದೆ.