ಬುಕಾ(ಉಕ್ರೇನ್):ಯುದ್ಧ ಪೀಡಿತ ಉಕ್ರೇನ್ ಈಗ ಸ್ಮಶಾನ ಭೂಮಿಯಾಗಿದೆ. ಬೀದಿಗಳಲ್ಲಿ ನೂರಾರು ಜನರ ಶವಗಳು ಪತ್ತೆಯಾಗುತ್ತಿದ್ದು, ರಷ್ಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳು ಮತ್ತಷ್ಟು ನಿರ್ಬಂಧಗಳನ್ನು ವಿಧಿಸುತ್ತಿವೆ.
ಕೀವ್ನ ಹೊರವಲಯದಿಂದ ರಷ್ಯಾ ಸೇನೆ ಮರಳಿದ ಬಳಿಕ ಎಲ್ಲೆಂದರಲ್ಲಿ ನಾಗರಿಕರ ಶವಗಳೇ ಪತ್ತೆಯಾಗುತ್ತಿವೆ. ಬೀದಿಗಳು, ಕಟ್ಟಡಗಳು ಮತ್ತು ಬಯಲು ಪ್ರದೇಶಗಳಲ್ಲಿ ಭೀಕರವಾಗಿ ಸುಟ್ಟ ಸ್ಥಿತಿ, ಅರ್ಧಂಬರ್ಧ ಸಮಾಧಿ ಮಾಡಿದ ಸ್ಥಿತಿಯಲ್ಲಿ ಮೃತದೇಹಗಳ ರಾಶಿ ಬಿದ್ದಿವೆ ಎಂದು ವರದಿಯಾಗಿದೆ. ಹೀಗಾಗಿ ರಷ್ಯಾ ವಿರುದ್ಧ ಯುದ್ಧಾಪರಾಧ ಆರೋಪ ಹೊರೆಸಲಾಗುತ್ತಿದೆ.
ಜತೆಗೆ ರಷ್ಯಾದಿಂದ ಇಂಧನ ಆಮದು ಕಡಿತಗೊಳಿಸಲು ಅನೇಕ ರಾಷ್ಟ್ರಗಳು ಮುಂದಾಗಿದೆ. ಅಲ್ಲದೇ, ಜರ್ಮನಿ ಮತ್ತು ಫ್ರಾನ್ಸ್ ರಾಷ್ಟ್ರಗಳು ರಷ್ಯಾದ ರಾಜತಾಂತ್ರಿಕರನ್ನು ವಜಾ ಮಾಡುವ ಮೂಲಕ ರಷ್ಯಾಕ್ಕೆ ವಿರುದ್ಧ ಪಾಠ ಕಲಿಸುತ್ತಿವೆ. ಇತ್ತ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್‌ನಲ್ಲಿನ ನಾಗರಿಕರ ಹತ್ಯೆ ಆರೋಪ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಯುದ್ಧಾಪರಾಧ ತನಿಖೆಗೆ ಕರೆ ನೀಡಿದ್ದಾರೆ. 'ಈ (ಪುಟಿನ್) ವ್ಯಕ್ತಿ ಕ್ರೂರಿ.. ಉಕ್ರೇನ್‌ನ ಬುಕಾದಲ್ಲಿ ಏನಾಗುತ್ತಿದೆ ಎಂಬುದನ್ನು ನೀವು ನೋಡಬಹುದು’ ಎಂದೂ ಬೈಡನ್ ಕಿಡಿಕಾರಿದ್ದಾರೆ.