ಮಾಸ್ಕೋ (ರಷ್ಯಾ): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಉಕ್ರೇನ್ ರಾತ್ರೋರಾತ್ರಿ ಎರಡು ಡ್ರೋನ್‌ಗಳ ಮೂಲಕ ದಾಳಿ ಮಾಡಲು ಪ್ರಯತ್ನಿಸಿದೆ ಎಂದು ರಷ್ಯಾದ ಅಧಿಕಾರಿಗಳು ಬುಧವಾರ ಗಂಭೀರ ಆರೋಪ ಮಾಡಿದ್ದಾರೆ. ಅಧಿಕೃತ ನಿವಾಸ ಕ್ರೆಮ್ಲಿನ್ ಮೇಲೆ ಈ ದಾಳಿಗೆ ಯತ್ನಿಸಲಾಗಿದೆ. ಆದರೆ, ಇದರಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ದಾಳಿಯ ಪ್ರಯತ್ನವನ್ನು ಭಯೋತ್ಪಾದಕ ಕೃತ್ಯ ಎಂದು ಕ್ರೆಮ್ಲಿನ್ ಖಂಡಿಸಿದೆ. ಉಕ್ರೇನ್ ದಾಳಿ ಮಾಡುವ ಮೊದಲೇ ಈ ಡ್ರೋನ್‌ಗಳನ್ನು ರಷ್ಯಾದ ಮಿಲಿಟರಿ ಮತ್ತು ಭದ್ರತಾ ಪಡೆಗಳು ನಿಲ್ಲಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಆ ಸಮಯದಲ್ಲಿ ಪುಟಿನ್ ಕ್ರೆಮ್ಲಿನ್ (Kremlin) ನಿವಾಸದಲ್ಲಿ ಇರಲಿಲ್ಲ. ಅವರು ನೊವೊ-ಒಗರಿಯೋವೊ (Novo-Ogaryovo)ನಿವಾಸದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್: ಬಕ್ಕಿಂಗ್ಹ್ಯಾಮ್ ಅರಮನೆ ಹೊರಗೆ ಅನುಮಾಸ್ಪದ ವ್ಯಕ್ತಿಯ ಬಂಧನ
ಪುಟಿನ್ ಸುರಕ್ಷಿತವಾಗಿದ್ದಾರೆ. ಅವರ ವೇಳಾಪಟ್ಟಿಯಲ್ಲೂ ಬದಲಾಗಿಲ್ಲ. ಮೇ 9ರಂದು ರಷ್ಯಾ ಆಚರಿಸುವ ವಿಜಯ ದಿನದ ಮುನ್ನ ಪುಟಿನ್ ಮೇಲೆ ಉದ್ದೇಶಪೂರ್ವಕ ದಾಳಿ ಪ್ರಯತ್ನ ಇದಾಗಿದೆ. ಅಂದು ನಿಗದಿಯಂತೆ ಸೇನಾ ಪರೇಡ್ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ತಮ್ಮ ವೇಳಾಪಟ್ಟಿಯಂತೆ ಬುಧವಾರ ಮಧ್ಯಾಹ್ನ ನಿಜ್ನಿ ನವ್ಗೊರೊಡ್ ಪ್ರದೇಶದ ಗವರ್ನರ್ ಗ್ಲೆಬ್ ನಿಕಿಟಿನ್ ಅವರೊಂದಿಗೆ ಪುಟಿನ್ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.