ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವಾರ ಮಾಸ್ಕೋಗೆ ಭೇಟಿ ನೀಡಲಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗಾಗಿ ಒತ್ತಡ ಹೇರುವಲ್ಲಿ ಭಾರತದ ಸಂಭವನೀಯ ಪಾತ್ರವನ್ನು ಹಲವಾರು ರಾಜತಾಂತ್ರಿಕರು ಮತ್ತು ವಿದೇಶಾಂಗ ನೀತಿ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಸಮಯ ಬಂದಾಗ ಭಾರತವು ಶಾಂತಿ ಸ್ಥಾಪನೆಯ ಪ್ರಯತ್ನಗಳಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದರ ಕುರಿತು ಭಾರತ ಸರ್ಕಾರದೊಳಗಿನ ಅಧಿಕಾರಿಗಳು ಈಗಾಗಲೇ ಚರ್ಚಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಯುದ್ಧಭೂಮಿಯಲ್ಲಿ ತಾನು ಮೇಲುಗೈ ಹೊಂದಿರುವುದಾಗಿ ಉಕ್ರೇನ್ ಭಾವಿಸಿದೆ. ಮತ್ತೊಂದೆಡೆ, ರಷ್ಯಾ ಕೂಡ ಉಕ್ರೇನ್ನೊಂದಿಗೆ ಮಾತನಾಡುವ ಯಾವುದೇ ಮನಸ್ಥಿತಿಯಲ್ಲಿಲ್ಲ.
ಆದಾಗ್ಯೂ ಯುದ್ಧದ ಕಾರಣದಿಂದಾಗಿ ಏರುತ್ತಿರುವ ಇಂಧನ ಬೆಲೆಗಳು ಉಕ್ರೇನ್‌ನಲ್ಲಿ ಜೀವನವನ್ನು ನಿಜವಾಗಿಯೂ ಶೋಚನೀಯಗೊಳಿಸಿವೆ. ಹೀಗಾಗಿ ಯಾವುದೋ ಒಂದು ಒಪ್ಪಂದ ಅಥವಾ ಕದನ ವಿರಾಮ ಏರ್ಪಡಬಹುದು ಎಂದು ತಜ್ಞರು ನಿರೀಕ್ಷಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿ ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮಾತುಕತೆ ನಡೆಸುವ ಬಗ್ಗೆ ಮಾತನಾಡಿದ್ದರು. ಈ ಕಲ್ಪನೆಯು ಕಾರ್ಯರೂಪಕ್ಕೆ ಬರದಿದ್ದರೂ, ಭಾರತವು ಎರಡೂ ರಾಷ್ಟ್ರಗಳೊಂದಿಗೆ ಮಾತು ಆರಂಭಿಸುವ ಸಂಭಾವ್ಯ ಶಾಂತಿಯ ಸಂಧಾನಕಾರ ಎಂದು ಜಗತ್ತು ಪರಿಗಣಿಸುತ್ತಿದೆ.