ಜಿನೀವಾ:ಹೈಟಿ ದೇಶದಲ್ಲಿ ಹೆಚ್ಚುತ್ತಿರುವ ನಾಗರಿಕ ಅಶಾಂತಿಗೆ ಆಹಾರ ಮತ್ತು ಇಂಧನ ಬೆಲೆ ಏರಿಕೆಯೇ ಕಾರಣ ಎಂದು ವಿಶ್ವ ಆಹಾರ ಕಾರ್ಯಕ್ರಮ (WFP) ಹಾಗೂ ಯುಎನ್ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
ಡಬ್ಲ್ಯುಎಫ್‌ಪಿಯ ಹೈಟಿಯ ಕಂಟ್ರಿ ಡೈರೆಕ್ಟರ್ ಜೀನ್ - ಮಾರ್ಟಿನ್ ಬೌರ್, ಶುಕ್ರವಾರ ವಿಡಿಯೋ ಲಿಂಕ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶವು ಆಹಾರ ಅಭದ್ರತೆ ಮತ್ತು ಮಾನವೀಯ ದುರಂತದಲ್ಲಿ ಆತಂಕಕಾರಿ ಪ್ರವೃತ್ತಿ ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಶೇ 30ರಷ್ಟು ಹಣ್ದುಬ್ಬರವಿದ್ದು, ಕಳೆದ 20 ವರ್ಷಗಳಲ್ಲಿ ಇದುವೇ ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿರುವುದಾಗಿದೆ. ಅದರಲ್ಲೂ ಆಹಾರದ ಕೊರತೆಯಿಂದಾಗಿ ಎಲ್ಲದರ ಬೆಲೆಯೂ ಹೆಚ್ಚಳವಾಗಿದ್ದು, ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ. ಹಿಂದಿನ ವರ್ಷಕ್ಕಿಂತ ಈ ವರ್ಷದ ಆಗಸ್ಟ್ನಲ್ಲಿ ಆಹಾರ ಬುಟ್ಟಿಯ ಬೆಲೆ ಶೇ 63ರಷ್ಟು ಹೆಚ್ಚಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ದೇಶದಲ್ಲಿ ಆಹಾರ ಅಭದ್ರತೆಯ ತೀವ್ರತೆ ಮತ್ತು ಪ್ರಮಾಣವು ಹೆಚ್ಚು ಹದಗೆಡುತ್ತಿದೆ ಎಂದು ಅವರು ಶುಕ್ರವಾರ ನೀಡಲಾದ ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣ (ಐಪಿಸಿ) ವರದಿಯನ್ನು ಉಲ್ಲೇಖಿಸಿದ್ದಾರೆ. ವರದಿಯ ಪ್ರಕಾರ, ದೇಶದಲ್ಲಿ 4.7 ಮಿಲಿಯನ್ ಜನರು ತೀವ್ರ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದರೆ, 1.8 ಮಿಲಿಯನ್ ಜನರು ಆಹಾರ ಅಭದ್ರತೆಯ ತುರ್ತು ಮಟ್ಟವನ್ನು ಎದುರಿಸುತ್ತಿದ್ದಾರೆ.
ಇದು ಆರು ತಿಂಗಳ ಹಿಂದೆ ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದ ಜನರ ಸಂಖ್ಯೆಗಿಂತ 200,000 ಮತ್ತು ಅರ್ಧ ಮಿಲಿಯನ್ ಹೆಚ್ಚಳವಾಗಿದೆ ಎಂದು ತಿಳಿಸಿದರು. ವಿಶ್ವಸಂಸ್ಥೆಯ ಮಕ್ಕಳ ನಿಧಿಗೆ ಜೇಮ್ಸ್ ಎಲ್ಡರ್ ಶುಕ್ರವಾರ ನೀಡಿದ ಪತ್ರಿಕಾಗೋಷ್ಠಿಯಲ್ಲಿ, ಹೈಟಿ ದೇಶದಲ್ಲಿ ಐದು ವರ್ಷದೊಳಗಿನ ಸುಮಾರು 100,000 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.
ಹೈಟಿಯ ಆರೋಗ್ಯ ಸಚಿವಾಲಯದ ಅಂಕಿ - ಅಂಶಗಳ ಪ್ರಕಾರ, ಶುಕ್ರವಾರದ ವೇಳೆಗೆ 357 ಶಂಕಿತ ಕಾಲರಾ ಪ್ರಕರಣಗಳು, 35 ದೃಢಪಡಿಸಿದ ಪ್ರಕರಣಗಳು ಮತ್ತು 21 ದೃಢೀಕೃತ ಸಾವುಗಳು ಸಂಭವಿಸಿವೆ. ಅದಲ್ಲದೇ ಕಾಲರಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು WHO ವಕ್ತಾರ ಮಾರ್ಗರೆಟ್ ಹ್ಯಾರಿಸ್ ಹೇಳಿದ್ದಾರೆ.
ಇದನ್ನೂ ಓದಿ:ಭಾರತದ ಆರ್ಥಿಕತೆ ವೇಗ ಬಜೆಟ್ನಲ್ಲಿ ಉಳಿಯಲಿದೆ: ನಿರ್ಮಲಾ ಸೀತಾರಾಮನ್