ಲಂಡನ್(ಇಂಗ್ಲೆಂಡ್):ನಿರೀಕ್ಷೆಯಂತೆ ಬ್ರಿಟನ್ ಪ್ರಧಾನಿಯಾಗಿ ಭಾರತ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ಐಟಿ ದಿಗ್ಗಜ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಅಳಿಯನಿಗೆ ಪ್ರಧಾನಿ ಹುದ್ದೆ ಒಲಿದುಬಂದಿದೆ.
ರಿಷಿ ಸುನಕ್ಗೆ 193 ಸಂಸದರು ಬೆಂಬಲ ನೀಡಿದ್ದರು. ಕೇವಲ 26 ಸಂಸದರ ಬೆಂಬಲ ಹೊಂದುವ ಮೂಲಕ ಪ್ರತಿಸ್ಪರ್ಧಿಯಾಗಿದ್ದ ಪನ್ನಿ ಮೊರ್ಡಾಂಟ್ ರೇಸ್ನಿಂದ ಹಿಂದೆ ಸರಿದ ಕಾರಣ ರಿಷಿ ಸುನಕ್ ಏಕಾಂಗಿಯಾಗಿ ಪ್ರಧಾನಿ ಹುದ್ದೆಗೆ ಏರಿದರು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
45 ದಿನ ಅಧಿಕಾರದಲ್ಲಿದ್ದ ಲಿಜ್ ಟ್ರಸ್ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವಲ್ಲಿ ಸೋತ ಕಾರಣ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನವನ್ನು ಭಾರತೀಯ ಸಂಜಾತ ರಿಷಿ ಸುನಕ್ ವಹಿಸಿಕೊಳ್ಳಲಿದ್ದಾರೆ.
ಬ್ರಿಟನ್ನ ಅತಿ ಕಿರಿಯ ಪ್ರಧಾನಿ:200 ವರ್ಷಗಳ ಬ್ರಿಟನ್ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ರಿಷಿ ಸುನಕ್ ಅವರು ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ನ 57 ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಅವರಿಗೆ ಈಗ ಕೇವಲ 42 ವರ್ಷ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಮಂತ್ರಿಮಂಡಲದಲ್ಲಿ ಅತಿಕಿರಿಯ ಸಚಿವನಾಗಿ ಸ್ಥಾನ ಪಡೆದಾಗ ಅವರಿಗೆ 39 ವರ್ಷ ವಯಸ್ಸಾಗಿತ್ತು. ಇದಾದ ಮೂರೇ ವರ್ಷದಲ್ಲಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಭಾರತದ ಪಂಜಾಬ್ ಮೂಲದ ರಿಷಿ ಸುನಕ್ ಅವರು ವಿಂಚೆಸ್ಟರ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಬಳಿಕ ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಫುಲ್‌ಬ್ರೈಟ್ ವಿದ್ವಾಂಸರಾಗಿ ಎಂಬಿಎ ಪಡೆದಿದ್ದಾರೆ.
ಸ್ಟ್ಯಾನ್‌ಫೋರ್ಡ್‌ನಲ್ಲಿ ಓದುತ್ತಿರುವಾಗ ಐಟಿ ದಿಗ್ಗಜ ಕಂಪನಿಯಾದ ಇನ್ಫೋಸಿಸ್ ಹುಟ್ಟುಹಾಕಿದ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಸಂಘ ಬೆಳೆದು ಬಳಿಕ 2009 ರಲ್ಲಿ ವಿವಾಹವಾದರು. ದಂಪತಿಗೆ ಅನುಷ್ಕಾ ಮತ್ತು ಕೃಷ್ಣ ಎಂಬ ಇಬ್ಬರು ಮಕ್ಕಳಿದ್ದಾರೆ.
5 ವರ್ಷದಲ್ಲಿ 6ನೇ ಪ್ರಧಾನಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇಂಗ್ಲೆಂಡ್, ರಾಜಕೀಯದಲ್ಲೂ ಮಹತ್ತರ ಬದಲಾವಣೆ ಕಂಡಿದೆ. ಕಳೆದ 5 ವರ್ಷಗಳಲ್ಲಿ 6 ಪ್ರಧಾನಿಗಳು ಬದಲಾಗಿದ್ದಾರೆ. ಅದರಲ್ಲೂ ಇದೇ ವರ್ಷ ಮೂವರು ಪ್ರಧಾನಿಗಳನ್ನು ದೇಶ ಕಾಣುವಂತಾಗಿದೆ. ಕೊರೊನಾ ವೇಳೆ ಪಾರ್ಟಿ ಮಾಡಿ ಬೋರಿಸ್ ಜಾನ್ಸನ್ ತಲೆದಂಡವಾದರೆ, ಕೊಟ್ಟ ಭರವಸೆ ಈಡೇರಿಸುವಲ್ಲಿ ಸೋತ ಲಿಜ್ ಟ್ರಸ್ ಇತ್ತೀಚೆಗಷ್ಟೇ ಹುದ್ದೆ ತೊರೆದಿದ್ದರು.
ಪೂರ್ಣ ಬೆಂಬಲ ನೀಡುವೆ:ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಹುದ್ದೆ ತೊರೆದ ಲಿಜ್ ಟ್ರಸ್ ನೂತನ ಪ್ರಧಾನಿ ರಿಷಿ ಸುನಕ್ರನ್ನು ಅಭಿನಂದಿಸಿದ್ದಾರೆ. ಟ್ವೀಟ್ ಮಾಡಿದ ಶುಭ ಕೋರಿರುವ ಅವರು, ನನ್ನ ಸಂಪೂರ್ಣ ಬೆಂಬಲ ನಿಮಗಿರಲಿದೆ ಎಂದಿದ್ದಾರೆ.
ಓದಿ:ರಿಷಿ ಸುನಕ್ಗೆ ಇಂದೇ ಒಲಿದು ಬರುತ್ತಾ ಬ್ರಿಟನ್ ಪ್ರಧಾನಿ ಪಟ್ಟ?