ಕರ್ನಾಟಕ

karnataka

ETV Bharat / international

ಬ್ರಿಟನ್​ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​ - ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್

ಬ್ರಿಟನ್​ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಹೊಸ ಪ್ರಧಾನಿ ಬಗ್ಗೆ ಚರ್ಚೆ ಆರಂಭವಾಗಿದ್ದು, ಭಾರತದ ಮೂಲದ, 42 ವರ್ಷದ ರಿಷಿ ಸುನಕ್ ಪ್ರಧಾನಿ ಹುದ್ದೆಯ ಮುಂಚೂಣಿಯಲ್ಲಿ ಇದ್ದಾರೆ.

Rishi Sunak, Now A Top Contender For UK Prime Minister
ಬ್ರಿಟನ್​ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​

By

Published : Jul 7, 2022, 6:14 PM IST

Updated : Jul 7, 2022, 7:59 PM IST

ಲಂಡನ್ (ಬ್ರಿಟನ್​): ಬ್ರಿಟನ್​ನಲ್ಲಿ ದಿಢೀರ್​ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ ಸಲ್ಲಿಸಿರುವ ಬೆನ್ನಲ್ಲೇ ಹೊಸ ಪ್ರಧಾನಿ ಆಯ್ಕೆಯ ಕಸರತ್ತು ಆರಂಭವಾಗಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್​ ಬ್ರಿಟನ್ ಪಿಎಂ ರೇಸ್​ನಲ್ಲಿ ಇದ್ದಾರೆ.

ಸಚಿವರ ಸರಣಿ ರಾಜೀನಾಮೆಗಳಿಂದ ಕಂಗೆಟ್ಟಿರುವ ಬೋರಿಸ್ ಜಾನ್ಸನ್ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಈ ಮೊದಲು ಅಂದರೆ ಮಂಗಳವಾರ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಮತ್ತು ಆರೋಗ್ಯ ಸಚಿವ ಸಾಜಿದ್ ಜಾವಿದ್ ರಾಜೀನಾಮೆ ನೀಡಿದ್ದರು. ಬುಧವಾರವೂ ಸಚಿವರ ರಾಜೀನಾಮೆ ಸರಣಿ ಮುಂದುವರಿದಿತ್ತು. ಸುನಾಕ್ ಬದಲಿಗೆ ಹಣಕಾಸು ಸಚಿವರಾಗಿ ನೇಮಕಗೊಂಡ ನದೀಮ್ ಜಹಾವಿ ಕೂಡ 36 ಗಂಟೆಯೊಳಗೆ ರಾಜೀನಾಮೆ ನೀಡಿದ್ದರು. ಇದು ಪ್ರಧಾನಿ ಬೋರಿಸ್ ಮೇಲೆ ಒತ್ತಡ ಹೆಚ್ಚಿಸಿತ್ತು.

ಬ್ರಿಟನ್​ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​

ಈಗ ಬೋರಿಸ್ ರಾಜೀನಾಮೆಯೊಂದಿಗೆ ಬ್ರಿಟನ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಇದರಲ್ಲಿ ರಿಷಿ ಸುನಕ್​ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಅಲ್ಲದೇ, ಸುನಕ್​ ನಂತರ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದ ನದೀಮ್ ಹೆಸರು ಕೂಡ ಪ್ರಧಾನಿ ಹುದ್ದೆಯ ಮುಂಚೂಣಿಯಲ್ಲಿದೆ.

ಯಾರು ಈ ರಿಷಿ ಸುನಕ್...?

  • ರಿಷಿ ಸುನಕ್ 1980ರ ಮೇ 12ರಂದು ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಜನಿಸಿದರು. ಅವರ ಪೂರ್ವಜರು ಪಂಜಾಬ್​ನವರಾಗಿದ್ದಾರೆ. ಮೊದಲು ಪೂರ್ವ ಆಫ್ರಿಕಾಕ್ಕೆ ವಲಸೆ ಹೋಗಿದ್ದ ರಿಷಿ ಸುನಕ್ ಪೂರ್ವಜರು ನಂತರ ತಮ್ಮ ಮಕ್ಕಳೊಂದಿಗೆ ಬ್ರಿಟನ್​ಗೆ ಬಂದು ನೆಲೆಸಿದರು. ರಿಷಿ ಅವರ ಸಂಪೂರ್ಣ ಬಾಲ್ಯ ಇಂಗ್ಲೆಂಡ್​ನಲ್ಲೇ ಕಳೆದಿದೆ.
  • ರಿಷಿ ಸುನಕ್ ಮ್ಯಾಂಚೆಸ್ಟರ್ ಕಾಲೇಜು ಮತ್ತು ಆಕ್ಸ್‌ಫರ್ಡ್‌ನ ಲಿಂಕನ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದಾರೆ. ನಂತರ ಎಂಬಿಎಗಾಗಿ ಕ್ಯಾಲಿಫೋರ್ನಿಯಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಅವರಿಗೆ ಅಲ್ಲಿಯೇ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಸಂಪರ್ಕಕ್ಕೆ ಬಂದರು. ಅಲ್ಲಿಂದ ಇಬ್ಬರು ಒಡನಾಟ ಪ್ರೀತಿಗೆ ತಿರುಗಿ 2009ರಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
    ಬ್ರಿಟನ್​ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​
  • ಪದವಿಯ ನಂತರ ರಿಷಿ 2001 ರಿಂದ 2004 ರವರೆಗೆ ಗೋಲ್ಡ್ಮನ್ ಸ್ಯಾಕ್ಸ್ ಇನ್ವೆಸ್ಟ್​​ಮೆಂಟ್ ಬ್ಯಾಂಕ್​ನಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದರು. ಆ ಬಳಿಕ ಹಲವು ಕಡೆ ಕೆಲಸ ಮಾಡಿದ ಅವರು 2014ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. 2015ರ ಸಾರ್ವತ್ರಿಕ ಚುನಾವಣೆಯಲ್ಲಿ ರಿಚ್‌ಮಂಡ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಎರಡನೇ ಅವಧಿಗೆ ಜಯ ಗಳಿಸಿದ ರಿಷಿ 2019ರಲ್ಲಿ ಕನ್ಸರ್ವೇಟಿವ್ ಪಕ್ಷದ ಬೋರಿಸ್ ಜಾನ್ಸನ್ ನಾಯಕತ್ವವನ್ನು ಬೆಂಬಲಿಸಿದರು.
  • ಬೋರಿಸ್ ಪ್ರಧಾನಿಯಾದ ಮೇಲೆ ರಿಷಿ ಅವರಿಗೆ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿಯ ಜವಾಬ್ದಾರಿಯನ್ನು ನೀಡಲಾಯಿತು. ಸುನಕ್ ಅವರ ಕಾರ್ಯಕ್ಷಮತೆಯನ್ನು ಗಮನಿಸಿ 2020ರ ಫೆಬ್ರವರಿಯಲ್ಲಿ ಸಂಪುಟ ವಿಸ್ತರಣೆ ವೇಳೆ ರಿಷಿ ಅವರನ್ನು ಪೂರ್ಣ ಪ್ರಮಾಣದ ಹಣಕಾಸು ಸಚಿವರನ್ನಾಗಿ ನೇಮಿಸಲಾಯಿತು.
  • ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರಿಷಿ ಸುನಕ್ ಕಾರ್ಯ ಬ್ರಿಟನ್‌ನಲ್ಲಿ ಬಹಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆರ್ಥಿಕತೆಗೆ ಸಹಾಯ ಮಾಡಲು ಶತಕೋಟಿ ಪೌಂಡ್‌ಗಳ ತುರ್ತು ಪರಿಹಾರ ಘೋಷಿಸಿ ವ್ಯಾಪಾರಿಗಳು, ಉದ್ಯೋಗಿಗಳು ಮತ್ತು ಕಾರ್ಮಿಕರ ಮೆಚ್ಚುಗೆ ಗಳಿಸಿದರು. ಆದರೆ, ಅದೇ ಸಮಯದಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ಲಾಕ್‌ಡೌನ್​ ನಡುವೆಯೇ ಪಾರ್ಟಿ ಮಾಡಿದ್ದರು. ಇದು ಬ್ರಿಟನ್‌ನ ರಾಜಕೀಯದಲ್ಲೇ ಅಲ್ಲೋಲ್ಲ ಕಲ್ಲೋಲ್ಲ ಎಬ್ಬಿಸಿತ್ತು. ಆ ಸಮಯದಲ್ಲೂ ರಿಷಿ ಮುಂದಿನ ಪ್ರಧಾನಿಯಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು.
  • ವಿವಾದಕ್ಕೂ ಸಿಲುಕಿದ್ದ ರಿಷಿ ದಂಪತಿ:ರಿಷಿ ಸುನಕ್​ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಭಾರತದಲ್ಲಿ ಗಳಿಸಿದ ಹಣಕ್ಕೆ ಬ್ರಿಟನ್​ನಲ್ಲಿ ತೆರಿಗೆ ಪಾವತಿಸಿಲ್ಲ ಎಂಬ ವಿವಾದಕ್ಕೆ ಸಿಲುಕಿದ್ದರು. ಅಕ್ಷತಾ ಇನ್ಫೋಸಿಸ್​ನಲ್ಲಿ ಶೇ.0.9ರಷ್ಟು ಷೇರು ಹೊಂದಿದ್ದಾರೆ. ಅಲ್ಲದೇ, ನೂರಾರು ಕೋಟಿ ರೂಪಾಯಿ ಡಿವಿಡೆಂಡ್‌ಗಳನ್ನು ಗಳಿಸುತ್ತಾರೆ. ಈ ಹಣಕ್ಕೆ ಅವರು ಬ್ರಿಟನ್​ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿಲ್ಲ ಎಂಬ ದೊಡ್ಡ ಮಟ್ಟದ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ:ಬ್ರಿಟನ್​ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ

Last Updated : Jul 7, 2022, 7:59 PM IST

ABOUT THE AUTHOR

...view details