ಯುಕೆ(ಲಂಡನ್):ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಯುಕೆ ಪ್ರಧಾನಿ ಹುದ್ದೆಗೆ ಚುನಾವಣೆ ಆರಂಭಗೊಂಡಿದೆ. ಮೊದಲನೇ ಸುತ್ತಿನ ಮತದಾನದಲ್ಲಿ ಇನ್ಫೋಸಿಸ್ ಸುಧಾಮೂರ್ತಿ ಅವರ ಅಳಿಯ ರಿಷಿ ಸುನಕ್ ಹೆಚ್ಚಿನ ಮತ ಪಡೆದುಕೊಂಡಿದ್ದು, ಪ್ರಧಾನಿ ರೇಸ್ನಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಿಷಿ ಸುನಕ್ 88 ಮತ ಪಡೆದುಕೊಂಡಿದ್ದು, ಉಳಿದಂತೆ ಪೆನ್ನಿ ಮೊರ್ಡಾಂಟ್ 67 ಹಾಗೂ ಟ್ರಸ್ ಲಿಜ್ 50 ಮತ ಗಳಿಕೆ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರು ಅಭ್ಯರ್ಥಿಗಳು ರೇಸ್ನಿಂದ ಹೊರಬಿದ್ದಿದ್ದಾರೆ.
ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲು ಮಾಜಿ ಚಾನ್ಸಲರ್ ರಿಷಿ ಸುನಕ್, ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್ಮನ್ ಕನ್ಸರ್ವೇಟಿವ್ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಉಳಿದಂತೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಹೊಸ ಚಾನ್ಸೆಲರ್ ನಧಿಮ್ ಜಹಾವಿ, ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್, ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಕೆಮಿ ಬಡೆನೊಚ್ ಮತ್ತು ಜೆರೆಮಿ ಹಂಟ್ ಮತ್ತು ಟೋರಿ ಬ್ಯಾಕ್‌ಬೆನ್‌ಚರ್ ಟಾಮ್ ತುಗೆನ್‌ಧಾಟ್ ಅವರು ಸಹ ಪ್ರಧಾನಿ ಹುದ್ದೆ ರೇಸ್ನಲ್ಲಿದ್ದಾರೆ.