ಇಸ್ಲಾಮಾಬಾದ್(ಪಾಕಿಸ್ತಾನ):ನಮ್ಮ ಮಾತೃಭೂಮಿಯ ಪ್ರತಿ ಇಂಚು ಜಾಗವನ್ನೂ ರಕ್ಷಿಸಿಕೊಳ್ಳುವ ಶಕ್ತಿ ನಮಗಿದೆ. ದೇಶದ ಮೇಲೆ ಭಾರತದ ಸೇನೆ ದಾಳಿ ಮಾಡಿದರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿದೆ ಎಂದು ಪಾಕ್ ಸೇನಾಪಡೆಯ ನೂತನ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಯುದ್ಧೋನ್ಮಾದದ ಹೇಳಿಕೆ ನೀಡಿದ್ದಾರೆ.
ಸೇನಾ ಮುಖ್ಯಸ್ಥರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯ ರಖ್ಚಿಕ್ರಿ ಸೆಕ್ಟರ್‌ನ ಮುಂಚೂಣಿ ಸೇನಾನೆಲೆಗಳಿಗೆ ಶನಿವಾರ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಭಾರತ ನೀಡಿದ ಹೇಳಿಕೆಯನ್ನು ಗಮನಿಸಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ತಾಯಿನಾಡನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಯುದ್ಧ ನಡೆದದ್ದೇ ಆದಲ್ಲಿ ಅದು ಶತ್ರುಗಳಿಗೇ ಕಂಟಕವಾಗಲಿದೆ ಎಂದು ಹೇಳಿದ್ದಾರೆ.
ನಾವು ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮವನ್ನು ಮುರಿಯಲು ಬಯಸುವುದಿಲ್ಲ. ಒಂದು ವೇಳೆ ಶತ್ರು ರಾಷ್ಟ್ರ ನಮ್ಮ ಮೇಲೆ ದಾಳಿ ಮಾಡಿದ್ದೇ ಆದಲ್ಲಿ, ನಮ್ಮ ಸೇನೆ ಯುದ್ಧಕ್ಕೆ ಸಿದ್ಧವಾಗಿದೆ. ಯುದ್ಧಭೂಮಿಯಲ್ಲೇ ಸೂಕ್ತ ಉತ್ತರ ನೀಡುತ್ತೇವೆ ಎಂದಿದ್ದಾರೆ.